ಈ ನಾಟಕ ಕಟ್ಟುವ ಕ್ರಿಯೆಯಲ್ಲಿ ತೊಡಗುವುದು ನಾಟಕದ ವಿಶಿಷ್ಟ ಭಾಗ ಅನ್ನಿಸಿತು


"ಒಂದು ನಾಟಕೀಯ ಲಾಜಿಕ್, ಅದರಲ್ಲಿ ಯಾವುದೇ “ಗ್ರೇ ಏರಿಯಾಗಳಿಗೆ ಅವಕಾಶ ಇಲ್ಲದಂತೆ” 0 ಮತ್ತು 1ಗಳು (ಬೇಕಿದ್ದರೆ ಹೌದು-ಅಲ್ಲ ಎಂದಿಟ್ಟುಕೊಳ್ಳಿ!) ಈ ನಾಟಕ ಕಟ್ಟುವ ಕ್ರಿಯೆಯಲ್ಲಿ ತೊಡಗುವುದು ನಾಟಕದ ವಿಶಿಷ್ಟ ಭಾಗ ಅನ್ನಿಸಿತು. ಪ್ರತೀ ಹಂತದಲ್ಲೂ ಒಂದು ಕ್ಷಣ ನಿಂತು ಯೋಚಿಸಿದರೆ, ಇಲ್ಲಿ ಸಾಕಷ್ಟು ಬೇರೆ ಸಾಧ್ಯತೆಗಳು ಇವೆಯಲ್ಲ ಅನ್ನಿಸುತ್ತದೆ, ಆದರೆ ಉಸಿರುಕಟ್ಟಿಸುವಷ್ಟು ತೀವ್ರತೆಯೊಂದಿಗೆ “ಆಟ” ಮುಂದಿನ ಹಂತಕ್ಕೆ ಸಾಗಿಬಿಟ್ಟಿರುತ್ತದೆ," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಬಿ. ಸುರೇಶ ಅವರ ‘ಅಡುಗೆ ಮನೆಯಲ್ಲೊಂದು ಹುಲಿ’ ಕೃತಿ ಕುರಿತು ಬರೆದ ವಿಮರ್ಶೆ.

“ಅವ್ರು ಸುಳ್ಳೇ ಹೇಳಿದ್ರೂ

ಇವತ್ತಲ್ಲ ನಾಳೆ ನಿಜ ಆಗತ್ತೆ ಸಾರ್!”

ಪೋಸ್ಟ್‌ಟ್ರುತ್ ಕಾಲದಲ್ಲಿ ಒಂದು ಸರ್ರಿಯಲಿಸ್ಟಿಕ್ ಸಂಗತಿ ಕೂಡ “ರಿಯಲ್” ಆಗಿ ಧುತ್ತೆಂದು ಎದುರು ಬಂದು ನಿಲ್ಲಬಲ್ಲುದು. ಅಲ್ಲಿ ಗ್ರೇ ಏರಿಯಾಗಳಾಗಲೀ, ಅಥವಾ ಬೇರೆ ಬಣ್ಣದ ಫ್ರಿಂಜ್‌ಗಳಾಗಲೀ ಇರುವುದಿಲ್ಲ. ಮನೆಯೊಳಗಿರುವ ಕಂಪ್ಯೂಟರಿನೊಳಗೆ ದೂರದಿಂದಲೇ “ಕ್ರಿಮಿನಲ್” ಹಸ್ತಕ್ಷೇಪ; ಫೋನಿನೊಳಗೇ ಬಂದು ಕೂರಬಲ್ಲ “ಪೆಗಾಸಸ್”... ಇವೆಲ್ಲ ಯಾವುದೋ ಕಥೆಯಲ್ಲೋ, ಸಿನಿಮಾದಲ್ಲೋ, ನಾಟಕದಲ್ಲೋ ಕಂಡದ್ದು-ಕೇಳಿದ್ದು ಅಲ್ಲ; ಇವೆಲ್ಲ ನಮ್ಮ ಕಾಲದ ತಾಜಾ ಅನುಭವಗಳು.

“ಬಿ ಸುರೇಶ್ ಅವರ ಅಡುಗೆಮನೆಯಲ್ಲೊಂದು ಹುಲಿ,” ಇಂತಹದೇ ಸರ್ರಿಯಲಿಸ್ಟಿಕ್ ಚಹರೆ ಇರುವ “ರಿಯಲಿಸ್ಟಿಕ್” ನಾಟಕ ಕೃತಿ. ನಗರದ ನಟ್ಟನಡುವೆ ಒಂದು ಮನೆಯಲ್ಲಿ ಹುಲಿ ಇದೆ ಎಂಬ ತಳ್ಳಿ ಅರ್ಜಿ ಉಂಟುಮಾಡುವ ತಲ್ಲಣಗಳು, ಈ ನಾಟಕದ ವಸ್ತು. ಅಧಿಕಾರಶಾಹಿಯ ಆಡಳಿತ ವಿಕೃತಿಗಳನ್ನು ಸ್ವಾತಂತ್ರದಾರಭ್ಯ ಅನುಭವಿಸಿರುವ, ಕಳೆದ ಹದಿನೈದು ವರ್ಷಗಳಿಂದ ನಿಜ ಜೀವನದಲ್ಲೇ ಇಂತಹ ಹಲವು ಪೋಸ್ಟ್‌ಟ್ರುತ್ ಸಂಗತಿಗಳನ್ನು ಅನುಭವಿಸಿರುವ ನಮಗೆ, ಈ ನಾಟಕದ ವಸ್ತುವೇನೂ ಹೊಸದೆನ್ನಿಸುವುದಿಲ್ಲ.

ಒಂದು ನಾಟಕೀಯ ಲಾಜಿಕ್, ಅದರಲ್ಲಿ ಯಾವುದೇ “ಗ್ರೇ ಏರಿಯಾಗಳಿಗೆ ಅವಕಾಶ ಇಲ್ಲದಂತೆ” 0 ಮತ್ತು 1ಗಳು (ಬೇಕಿದ್ದರೆ ಹೌದು-ಅಲ್ಲ ಎಂದಿಟ್ಟುಕೊಳ್ಳಿ!) ಈ ನಾಟಕ ಕಟ್ಟುವ ಕ್ರಿಯೆಯಲ್ಲಿ ತೊಡಗುವುದು ನಾಟಕದ ವಿಶಿಷ್ಟ ಭಾಗ ಅನ್ನಿಸಿತು. ಪ್ರತೀ ಹಂತದಲ್ಲೂ ಒಂದು ಕ್ಷಣ ನಿಂತು ಯೋಚಿಸಿದರೆ, ಇಲ್ಲಿ ಸಾಕಷ್ಟು ಬೇರೆ ಸಾಧ್ಯತೆಗಳು ಇವೆಯಲ್ಲ ಅನ್ನಿಸುತ್ತದೆ, ಆದರೆ ಉಸಿರುಕಟ್ಟಿಸುವಷ್ಟು ತೀವ್ರತೆಯೊಂದಿಗೆ “ಆಟ” ಮುಂದಿನ ಹಂತಕ್ಕೆ ಸಾಗಿಬಿಟ್ಟಿರುತ್ತದೆ. ಆ ಬ್ಲ್ಯಾಕ್ ಅಂಡ್ ವೈಟ್ ಅನಿವಾರ್ಯತೆಯ ಸೃಷ್ಟಿಯೇ ಈ ನಾಟಕದ ಕಥೆಯ ಯಶಸ್ಸು. ಒಮ್ಮೆ ಅದು ನಿಮ್ಮನ್ನು ಒಳಗೊಂಡರೆ, ಹೊರಬಿಡುವುದು ನಾಟಕದ ಕೊನೆಯಲ್ಲಿ ಹಳೆಯ ತಲೆಮಾರಿನ “ಸ್ವಾತಂತ್ರ್ಯ ಹೋರಾಟಗಾರರೊಬ್ಬರು” ಬಲಿ ಆಗುವ ಮೂಲಕವೇ. ಈಗ ಎರಡೇ ಆಯಾಮಗಳ ಸೋಷಿಯಲ್ ಮೀಡಿಯಾ ಬದುಕಿನಲ್ಲಿ ಇಂತಹವನ್ನು ಸಾಕಷ್ಟು ಕಂಡಿರುವುದರಿಂದ ನಾಟಕದ ವಸ್ತು ನಮಗೆ ಪರಕೀಯ ಅನ್ನಿಸುವುದೇ ಇಲ್ಲ. ಲೇಖಕರೂ ತನಗೆ ಈ ನಾಟಕ ಕಟ್ಟಲು ಇಂತಹದೇ ಸೋಷಿಯಲ್ ಮೀಡಿಯಾದ “ಕಲ್ಚರಲ್ ಸೈಲೆನ್ಸಿಂಗ್” ವಿನ್ಯಾಸ ಪ್ರೇರಣೆ ಎಂದಿದ್ದಾರೆ.

ತನ್ನ ಆರಂಭದ ಮಾತುಗಳಲ್ಲಿ “ಒಂದು ಸುಳ್ಳಿನ ಪಯಣ” ಎಂದೇ ಈ ನಾಟಕವನ್ನು ಗುರುತಿಸುವ ಬಿ ಸುರೇಶ್, ಸುಳ್ಳಿನ ಸವಾಲು ಮಾಡುವ ಅಲ್ಲೋಲ-ಕಲ್ಲೋಲಗಳು ಮುಗಿದ ಬಳಿಕ, “ಈ ದೇಶಕ್ಕೆ ಬೇಕಾಗಿರುವುದು ಭಕ್ತಿ ಅಲ್ಲ ಗೆಳೆಯಾ…!ಪ್ರೇಮ. ದೇಶಪ್ರೇಮ! ಎಂದು ನಾಟಕವನ್ನು ಕೊನೆಗೊಳಿಸುತ್ತಾರೆ. ಪೋಸ್ಟ್ ಟ್ರುತ್ ಕಾಲದಲ್ಲಿ ಸಮಾಜದ ಸತ್ಯಗಳನ್ನು ಹುಡುಕುವ ಕೆಲಸ ಕೂಡ ಇಷ್ಟು ಸರಳ ಇರಲಾರದು; ಇರಬಾರದು.

MORE FEATURES

ಪ್ರಧಾನವಾಗಿ ಇದು ಭಾವ ಪರಿವಶತೆಯ ಉದ್ದೀಪನ ಕಾವ್ಯ

10-04-2025 ಬೆಂಗಳೂರು

“ಈ ಕಾವ್ಯ ಅನುಸರಿಸಿದ್ದು ಸರಳ ಮಾದರಿಯ ತಂತ್ರವನ್ನೇ ಆಯ್ಕೆ ಮಾಡಿಕೊಂಡಿದೆ. ವೈಯಕ್ತಿಕ ಬದುಕಿನ ನಿಷೇಧಗಳು, ಪಾಪ ಪ...

ಕವನಗಳೆಂದರೆ ಭಾವದ ಅನಾವರಣ

10-04-2025 ಬೆಂಗಳೂರು

"ಪಾರಿಜಾತದ ಸುವಾಸನೆಯ ಕುರಿತಾದ ಒಂದು ಕವನ. ಬಹಳ ನಾಜೂಕಾದ, ದೂರ ದೂರದವರೆಗೂ ತನ್ನ ಘಮವನ್ನು ಹಬ್ಬಿ ಸೆಳೆಯುವ ಪುಷ್...

ಭಾರತ ಕತೆಯಲ್ಲಿ ನಿರ್ಣಾಯಕವಾಗಿ ಕಾಣಿಸುವುದು ಕುರುಕ್ಷೇತ್ರದ ಆ ಹದಿನೆಂಟು ದಿನಗಳು

10-04-2025 ಬೆಂಗಳೂರು

“ನಮಗೆಲ್ಲಾ ಗೊತ್ತೇ ಇರುವ ಕತೆಯನ್ನು ಅಕ್ಷರದ ಮೇಲೆ ಅಕ್ಷರವಿಟ್ಟು ಪೋಣಿಸಿದ ಈ ಕೃತಿ ನಮ್ಮನ್ನು ಹೊಸಹೊಳಹುಗಳತ್ತ ಹ...