ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

Date: 18-08-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಇದು. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಜರ್ಮನಿಯ ಆನ್ಸೆಲ್ಮ್‌ ಕೀಫರ್‌ ಅವರ ಬಗ್ಗೆ ಬರೆದಿದ್ದಾರೆ.

ಕಲಾವಿದ: ಆನ್ಸೆಲ್ಮ್ ಕೀಫರ್ (Anselm Kiefer)

ಜನನ: 8 ಮಾರ್ಚ್, 1945 (ಜರ್ಮನಿಯ ಡೊನವೆಷಿಂಗೆನ್ ಎಂಬಲ್ಲಿ)
ಶಿಕ್ಷಣ: ಕಾನೂನು ಮತ್ತು ಯುರೋಪಿಯನ್ ಭಾಷೆಗಳು; ಫ್ರಾಯಿಬರ್ಗ್ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಮತ್ತು ಕಾರ್ಲ್ ಷ್ರುವ ಆರ್ಟ್ ಅಕಾಡೆಮಿಗಳಲ್ಲಿ ಕಲಾ ಶಿಕ್ಷಣ
ವಾಸ: ಪ್ಯಾರಿಸ್, ಫ್ರಾನ್ಸ್.
ಕವಲು: ನಿಯೊ ಎಕ್ಸ್ ಪ್ರೆಷನಿಸಂ
ವ್ಯವಸಾಯ: ಪೇಂಟಿಂಗ್ ಗಳು, ಗಾಜಿನ ಪ್ರದರ್ಶನ ಪೆಟ್ಟಿಗೆಗಳು, ಶಿಲ್ಪಗಳು, ಇನ್ಸ್ಟಾಲೇಷನ್ ಗಳು, ಕಾಗದದ ಮೇಲೆ ಚಿತ್ರಗಳು, ವಾಟರ್ ಕಲರ್, ಕೊಲ್ಯಾಜ್, ರೂಪ ಬದಲಾಯಿಸಿದ ಫೊಟೊಗ್ರಾಫ್ ಗಳು, ಕಲೆಗೆ ಸಂಬಂಧಿಸಿದ ಪುಸ್ತಕಗಳು.

ಆನ್ಸೆಲ್ಮ್ ಕೀಫರ್‌ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ಕಿಸಿ


ಆಧುನಿಕೋತ್ತರ (ಪೋಸ್ಟ್ ಮಾಡರ್ನ್) ಕಲಾಪರಂಪರೆಯ ಮಹತ್ವದ ಕಲಾವಿದರೆಂದು ಗುರುತಾಗಿರುವ, ಆನ್ಸೆಲ್ಮ್ ಕೀಫರ್, ಸಮಕಾಲೀನ ಜಾಗತಿಕ ಕಲೆಯ ಒಟ್ಟು ಸಂದರ್ಭದಲ್ಲಿ, ಪಿಕಾಸೊ ಬಳಿಕ ಒಂದು ಫಾರ್ಮ್ ಅನ್ನು (ಫಾರ್ಮ್ ಎಂದರೆ ಒಂದು ಕಲಾಕೃತಿಯ ದೈಹಿಕ ಸ್ವರೂಪ) ಕೂಡ ಭಾವನೆಯ ಭಾಗವಾಗಿಯೇ ಅಭಿವ್ಯಕ್ತಿಸುವ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದವರು ಎಂಬ ಕಾರಣಕ್ಕೆ ಸಮಕಾಲೀನ ಕಲಾಜಗತ್ತಿನಲ್ಲಿ ಮಹತ್ವದ ಸ್ಥಾನ ಪಡೆಯುತ್ತಾರೆ.

ಜರ್ಮನಿಯಲ್ಲಿ ಹಿಟ್ಲರ್ ನಡೆಸಿದ ಮಾರಣಹೋಮದ ಬಳಿಕ, ಅಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕಂಡುಬಂದ ಆಘಾತಕಾರಿ ಮೌನ ಮತ್ತು ಎರಡನೇ ಮಹಾಯುದ್ಧದ ಬಳಿಕದ ವಿನಾಶಗಳಿಂದ ಗಾಢವಾಗಿ ಪ್ರೇರಿತರಾದವರು ಕೀಫರ್. "creation and destruction are one and the same" ಎಂಬ ಕೀಫರ್ ಕಲ್ಪನೆಯ ಮೂಲ ಇರುವುದು ಈ ಎರಡನೇ ಮಹಾಯುದ್ಧ ತಂದೊಡ್ಡಿದ ಮಾರಣಹೋಮ ಮತ್ತು ವಿನಾಶದಲ್ಲಿ. ಆಧುನಿಕೋತ್ತರ “ನಿಯೊ-ಎಕ್ಸ್ ಪ್ರೆಷನಿಸಂ” ಕವಲಿನ ಪ್ರತಿನಿಧಿ ಕೀಫರ್ ಅವರ ಕಲಾಕೃತಿಗಳಲ್ಲಿ ಮತ್ತೆ ಮತ್ತೆ ಮರುಕಳಿಸುವ ಅರಣ್ಯ, ನದಿ, ಬಯಲುಗಳನ್ನು ಒಳಗೊಂಡ ಭೂದೃಶ್ಯಗಳು ಹುಟ್ಟಿಸುವ ವಿಷಣ್ಣತೆ ನೋಡುಗರ ಬಾಯಿ ಕಟ್ಟಿಸುವಷ್ಟು ಪರಿಣಾಮಕಾರಿ.

ಕಾನೂನು ವಿದ್ಯಾರ್ಥಿಯಾಗಿ, ಭಾವನೆಗಳಿಲ್ಲದ ಭಾಷೆಯ ಮೂಲಕ “ನ್ಯಾಷನಲ್ ಸೋಷಿಯಲಿಸಂ (ನಾಜಿಯಿಸಂ)” ಅನ್ನು ತಾನು ಓದಬೇಕಾಯಿತು ಎನ್ನುವ ಕೀಫರ್, ಯುದ್ಧದ ಬಳಿಕದ ಜರ್ಮನಿಯ ನಿಗೂಢ ಮೌನದ ಬಗ್ಗೆ ಕುತೂಹಲ ಹೊಂದಿದ್ದರು. ತನ್ನ ಸುತ್ತಮುತ್ತ ಇರುವ ಒಂದಿಡೀ ಜನರೇಶನ್ ಹಲೊಕಾಸ್ಟ್ (ಅಂದರೆ ಹಿಟ್ಲರ್ ಪಡೆ ನಡೆಸಿದ ಯಹೂದಿಯರ ಮಾರಣಹೋಮ) ಕ್ರೌರ್ಯದ ಭಾಗವಾಗಿದ್ದರೂ ಕೂಡ, ಅವರಾರೂ ಈ ಬಗ್ಗೆ ಮಾತನಾಡುತ್ತಿರಲಿಲ್ಲ ಎಂಬ ಸಂಗತಿ ಕಾಡುತ್ತಾ ಹೋದಂತೆ, ಅವರು ಕಾನೂನು ಕಲಿಕೆಯನ್ನು ಅರ್ಧದಲ್ಲೇ ಬಿಟ್ಟು ಕಲಾಶಾಲೆ ಸೇರಿದರು. ಕಾರ್ಲ್ ಷ್ರುವ ಕಲಾಶಾಲೆಯಲ್ಲಿ ಕಲಿಕೆ ವೇಳೆ, ಅವರ ಶೈಕ್ಷಣಿಕ ಕಲಾ ಪ್ರಾಜೆಕ್ಟ್ “Occupations” ನ ಭಾಗವಾಗಿ, ಕೀಫರ್ ಜರ್ಮನಿ ವಶಪಡಿಸಿಕೊಂಡಿದ್ದ ಎಲ್ಲ ಯುರೋಪಿಯನ್ ಭೂಭಾಗಗಳಿಗೆ ಹೋಗಿ, ಅಲ್ಲಿ ನಾಜಿ ಸಮವಸ್ತ್ರ್ರದಲ್ಲಿ ನಿಂತು ಅರಣ್ಯಕ್ಕೆ, ಸಮುದ್ರಕ್ಕೆ, ಗುಡ್ಡಕ್ಕೆ, ಬಯಲಿಗೆ ನಾಜಿ ಸೆಲ್ಯೂಟ್ ಹೊಡೆಯುವ ಚಿತ್ರಗಳನ್ನು ತೆಗೆದು ತಂದಿದ್ದರು. ಈ ಚಿತ್ರಗಳು 1975ರಲ್ಲಿ ಮೊದಲಿಗೆ ಬೆಳಕಿಗೆ ಬಂದವು. ಭಾರೀ ವಿವಾದಕ್ಕೀಡಾದ ಈ ಸರಣಿಚಿತ್ರಗಳು ಕೀಫರ್ ಅವರ ಮೊದಲ ಪ್ರಮುಖ ಕಲಾಕೃತಿ. ಆರಂಭದಲ್ಲಿ ಕಲಾವಿದರಾದ ವಾನ್ ಗೋ ಮತ್ತು ಜೋಸೆಫ್ ಬೊಯ್ಸ್ ಅವರ ಕಲಾಕೃತಿಗಳು ಕೀಫರ್ ಮೇಲೆ ಪ್ರಭಾವ ಬೀರಿದ್ದವು.

ಈಗ 50 ವರ್ಷಗಳ ಬಳಿಕ, ಮತ್ತೆ ಯುರೋಪಿನಲ್ಲಿ ಮತ್ತು ಜಗತ್ತಿನ ಇತರೆಡೆಗಳಲ್ಲಿ ಬಲಪಂಥೀಯ ಪಾಪ್ಯುಲಿಸಂ ಹಿಂಸಾತ್ಮಕವಾಗಿ ಮತ್ತೆ ತಲೆ ಎತ್ತುತ್ತಿರುವುದನ್ನು ಕಂಡು, “ಹೊಸ ಸಂವಿಧಾನ ಇದೆಯೆಂದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದಲ್ಲ. ಆ ಮನಃಸ್ಥಿತಿ ಯಾವತ್ತೂ ಇತ್ತು. ಅದು ಕೆಲವೊಮ್ಮೆ ಅಡಗಿಕೊಂಡಿರುತ್ತದೆ ಅಷ್ಟೇ.” ಎನ್ನುತ್ತಾರೆ. ರಾಜಕೀಯ ಅಭಿವ್ಯಕ್ತಿಗಳಿರುವ ಕಲಾವಿದ ಅಲ್ಲವಾದರೂ, ತಾನು ತಳೆಯುವ ಕೆಲವು ನಿಲುವುಗಳಿಗೆ ಅವರು ಬದ್ಧರು. ಇರಾಕ್ ಯುದ್ಧದ ಕಾರಣಕ್ಕಾಗಿ ಅವರು ಬಹುಕಾಲ ಅಮೆರಿಕಕ್ಕೆ ಹೋಗಿರಲಿಲ್ಲ. ತನ್ನ ಚಿತ್ರಗಳನ್ನು ದೊಡ್ಡ ಗಾತ್ರದಲ್ಲಿ ರಚಿಸುವ ಕೀಫರ್, ಅದನ್ನು ಪ್ರದರ್ಶಿಸುವುದೂ ಗ್ಯಾಲರಿಗಳವರಿಗೆ ಸವಾಲಾಗಬೇಕು. “ಅದೂ ಒಂದು ವಿಧದ ಪ್ರತಿಭಟನೆಯೇ” ಎನ್ನುತ್ತಾರೆ!

ಸೀಸ, ಕಾಂಕ್ರೀಟು, ಒಣಹುಲ್ಲು, ಬೂದಿಯಂತಹ ವಸ್ತುಗಳನ್ನು ತನ್ನ ಕಲಾಕೃತಿಗಳಲ್ಲಿ ವ್ಯಾಪಕವಾಗಿ ಬಳಸುವ ಕೀಫರ್, ಆ ವಸ್ತುಗಳ ಬಳಕೆಯ ಕಾರಣದಿಂದಾಗಿ ತನ್ನ ಕಲಾಕೃತಿಗಳು ದಿನಕಳೆದಂತೆ ರೂಪ ಬದಲಾಯಿಸುವುದನ್ನು/ಶಿಥಿಲಗೊಳ್ಳುವುದನ್ನು ಮತ್ತು ಆ ಹಾದಿಯಲ್ಲಿ ಕಲಾಕೃತಿಯು ಕಲಾವಿದನ ಹಂಗು ಕಳಚಿಕೊಳ್ಳುವುದನ್ನು ಕೂಡ ತನ್ನ ಕಲೆ ವ್ಯಕ್ತಪಡಿಸುತ್ತಿರುವ ಭಾವನೆಗಳ (ಕಾನ್ಸೆಪ್ಚುವಲ್) ಅಭಿವ್ಯಕ್ತಿಯ ಭಾಗ ಎಂದು ಬಿಂಬಿಸುತ್ತಾರೆ. ಹೀಗೆ ಕಲಾಕೃತಿಯಲ್ಲಿ ಬಳಕೆಯಾಗುವ ವಸ್ತುಗಳು, ಕಲಾಕೃತಿಯ ರಚನೆಯ ಪ್ರಕ್ರಿಯೆ ಕೂಡ ಆ ಕಲಾಕೃತಿ ವ್ಯಕ್ತಪಡಿಸುವ ಭಾವನಾತ್ಮಕ ಅಭಿವ್ಯಕ್ತಿಯ ಭಾಗ ಆಗುತ್ತಾ ಸಾಗುವುದು ಕೀಫರ್ ಅವರನ್ನು ಆಧುನಿಕೋತ್ತರ ಸಂದರ್ಭದಲ್ಲಿ ಮಹತ್ವದ ಕಲಾವಿದ ಎಂದು ಗುರುತಿಸಲು ಒಂದು ಪ್ರಮುಖ ಕಾರಣವಾಗಿದೆ.
1992ರಿಂದ ದಕ್ಷಿಣ ಫ್ರಾನ್ಸ್ ನ ಸಿವೆನ್ ಎಂಬ ಹಳ್ಳಿಯ ಕಾಡು ಮಗ್ಗುಲಿನಲ್ಲಿ “ಲಾ ರಿಬಾಟ್” ಎಂಬ 200 ಎಕರೆ ಜಾಗದಲ್ಲಿ ಸ್ಟುಡಿಯೊ ನಿರ್ಮಿಸಿಕೊಂಡಿರುವ ಕೀಫರ್ ಆ ಇಡಿಯ ಜಾಗವೇ ಸಂಪೂರ್ಣ ಕಲಾಕೃತಿ (Brobdingnagian Gesamtkunstwerk) ಎಂದು ಕರೆದುಕೊಂಡಿದ್ದಾರೆ. ಈ ಇಡಿಯ ಜಾಗ ಕಳೆದ ಶತಮಾನದ ಮಹತ್ವದ ಕಲಾಕೃತಿ ಎಂದೇ ಗುರುತಾಗಿದೆ. ವಿವರಗಳು ಇಲ್ಲಿವೆ-

:
ಹಿಟ್ಲರ್ ಪ್ರೇರಿತ ನವ ಜರ್ಮನ್ ಸಾಮ್ರಾಜ್ಯದ (third reich) ದೃಶ್ಯಾತ್ಮಕ ಮತ್ತು ಬಾಯ್ದರೆ ಸಂಜ್ಞೆಗಳ ಕುರಿತು ಜರ್ಮನಿ ತಳೆದ ಯುದ್ಧದ ಬಳಿಕದ ಮೌನವನ್ನು ವ್ಯಂಗ್ಯವಾಗಿಯೇ ಪ್ರಶ್ನಿಸುವ ಕೀಫರ್ ಅವರ ದೊಡ್ಡಗಾತ್ರದ ಚಿತ್ರಗಳು ಮತ್ತು ಶಿಲ್ಪಗಳು ಒಂದು ತೂಕವಾದರೆ, ಅವರ ಕಾಗದದ ಮೇಲಿನ ಚಿತ್ರಗಳು ಬಹಳ ನವಿರಾಗಿ ಕಾವ್ಯಾತ್ಮಕವಾಗಿವೆ; ಅವರ ಓದಿನ ಆಳವನ್ನು ಬಿಂಬಿಸುತ್ತವೆ.
ಕೀಫರ್ ಜೊತೆ ಒಂದು ಕುತೂಹಲಕರ ಮಾತುಕತೆ ಇಲ್ಲಿದೆ

(ಈ ಸಂದರ್ಶಕ, ಇಟಲಿಯ ಕಲಾವಿಮರ್ಶಕರಾದ ಜರ್ಮಾನೊ ಸೆಲಾಂತ್ ಇದೇ ಎಪ್ರಿಲ್ ನಲ್ಲಿ ಕೊರೊನಾಕ್ಕೆ ಬಲಿ ಆದರು)

:

ಆನ್ಸೆಲ್ಮ್ ಕೀಫರ್ (Anselm Kiefer) ಕಲಾಕೃತಿಗಳು

 

ಈ ಅಂಕಣದ ಮೊದಲ ಬರೆಹ:

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...