ಹಿರಿಯ ಲೇಖಕ ಜಿ. ಶ್ರೀನಿವಾಸಮೂರ್ತಿ ಅವರ ಕೃತಿ-ಪಕ್ಷಿಗಳ ಹಾರಾಟ. ನಿರ್ಮಲ ಆಗಸದಲ್ಲಿ ಹಾಗೂ ಸ್ಥಿರ ವಾತಾವರಣದಲ್ಲಿ ಆನಂದದಿಂದ ಹಾರಾಡುವ ಪಕ್ಷಿಗಳು ಮಳೆ, ಬಿರುಗಾಳಿ ಮುಂತಾದವುಗಳಿಂದ ಉಂಟಾಗುವ ಗೊಂದಲಮಯ ವಾತಾವರಣದಲ್ಲಿ ತಮ್ಮ ಹಾರಾಟದ ತಂತ್ರಗಳನ್ನು ಸೂಕ್ತವೆನಿಸಿದಂತೆ ಬದಲಿಸಿಕೊಂಡು ಅಪಘಾತಕ್ಕೆ ಒಳಗಾಗದಂತೆ ಸುಖವಾಗಿ ಹಾರಾಟ ನಡೆಸುತ್ತವೆ. ಪಕ್ಷಿಗಳ ಹಾರಾಟದ ಇಂತಹ ವೈವಿಧ್ಯಮಯ ತಾಂತ್ರಿಕತೆಗಳು ವೈಮಾನಿಕ ಕ್ಷೇತ್ರದಲ್ಲಿನ ವಿಜ್ಞಾನಿಗಳ ಚಿಂತನೆಗೆ ಪೂರಕವೂ, ಸವಾಲೂ ಆಗಿರುತ್ತವೆ. ಪಕ್ಷಿಗಳ ಹಾರಾಟದ ಅಂಶಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಮಥಿಸುವ ಪ್ರವೃತ್ತಿ ಬೆಳೆದುಬಂದಿದೆ. ಅನೇಕ ಬಗೆಯ ಪಕ್ಷಿಗಳ ದೇಹಾಂಗಗಳ ವಿನ್ಯಾಸ ಮುಂತಾದವುಗಳನ್ನು ಕುರಿತ ಅತ್ಯುಪಯುಕ್ತ ಮಾಹಿತಿಗಳು ಈ ಪುಸ್ತಕದಲ್ಲಿದ್ದು ಇವುಗಳ ಸರಳ ವಿಶ್ಲೇಷಣೆಗಳು ಎಲ್ಲರನ್ನೂ ಮುದಗೊಳಿಸುತ್ತವೆ. ಪಕ್ಷಿಗಳ ಹಾರಾಟವು ವಿಜ್ಞಾನ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ ಮಾಹಿತಿಯನ್ನು ಒಳಗೊಂಡ ಪುಸ್ತಕವಿದು.
(ಹೊಸತು, ಮಾರ್ಚ್ 2015, ಪುಸ್ತಕದ ಪರಿಚಯ)
ಬಾನಂಗಳದಲ್ಲಿ ಹಾರಾಡುವ ರೆಕ್ಕೆಯ ರಸಿಕರು ನಮ್ಮನ್ನೂ ಆಗಸದಲ್ಲಿ ಹಾರುವಂತೆ ಪ್ರೇರೇಪಿಸುವವು ಎಂದರೆ ತಪ್ಪಲ್ಲ. ನೆಲ ಬಿಟ್ಟು ಬಾನಿನಲ್ಲಿ ತೇಲುವುದೂ ರೆಕ್ಕೆ ಬಡಿಯುತ್ತ ಸಾವಿರಾರು ಮೈಲಿ ಹಾರುವುದೂ ರೋಚಕ ಅನುಭವವಲ್ಲವೇ ? ಮಳೆ-ಗಾಳಿ- ಬಿರುಗಾಳಿಗಳಿಗೆ ತಮ್ಮ ಹಾರಾಟದ ತಂತ್ರಗಳನ್ನು ಬದಲಿಸಿಕೊಂಡು ಪಕ್ಷಿಗಳು ಲೀಲಾಜಾಲವಾಗಿ ಹಾರಬಲ್ಲವೆಂದು ಇಲ್ಲಿ ಹೇಳಲಾಗಿದೆ. ಅವುಗಳ ಹಾರುವಿಕೆಯಲ್ಲೂ ವೈಜ್ಞಾನಿಕ ತತ್ವವಿಲ್ಲದೆ ಇದ್ದೀತೇ ? ಗಾಳಿಯಲ್ಲಿ ಹಗುರವಾಗಿ ತೇಲಲು ರೆಕ್ಕೆಗಳು, ದಿಕ್ಕು ಬದಲಿಸಲು ಪುಕ್ಕ, ಪಾರಾಟಕ್ಕೆ ಯೋಗ್ಯವೆನಿಸುವ ಅಂಗಾಂಗರಚನೆ ಹಕ್ಕಿಗಳಿಗಿವೆ. ಲೋಕಕ್ಕೆಲ್ಲ ಹಕ್ಕಿ ಎಂಬ ಒಂದೇ ಹೆಸರಾದರೂ ಸುಮಾರು ಹತ್ತು ಸಾವಿರಕ್ಕೂ ಮೀರಿ ಪ್ರಭೇದಗಳು ಇವೆಯಂತೆ. ಪ್ರಾದೇಶಿಕ ಪಕ್ಷಿಯೆಂದು ಗುರುತಿಸಿದರೂ ಎಲ್ಲ ದೇಶಗಳ ಹಕ್ಕಿಗಳೂ ನಿಗದಿತ ಪ್ರದೇಶಕ್ಕೆ ಪ್ರತಿವರ್ಷ ವಲಸೆ ಬ೦ದು ಮತ್ತೆ ಸ್ವಸ್ಥಾನಕ್ಕೆ ಮರಳುತ್ತವಂತೆ! ಅವು ಧ್ರುವ ಪ್ರದೇಶದಿಂದ ಮತ್ತೊಂದು ಧ್ರುವಕ್ಕೆ ಹೋಗಿಬರುವುದಂತೂ ವಿಸ್ಮಯಕಾರಿ. ಹಕ್ಕಿಗಳಿಗೆ ಯಾವ ದೇಶದ ಗಡಿರೇಖೆಗಳೂ ಲೆಕ್ಕಕ್ಕೇ ಇಲ್ಲ. ಅವು ಸ್ವಚ್ಛಂದ ವಿಹಾರಿ. ನೆಲದ ಹಂಗಿಲ್ಲದ, ಎತ್ತರದ ಮರಗಳಲ್ಲಿ ಗೂಡುಕಟ್ಟಿ ನೆಲೆಸುವ ಸ್ವತಂತ್ರ ಜೀವಿಗಳು, ಇಂತಹ ಹಲವು ಹತ್ತು ರೋಮಾಂಚಕಾರಿ ವಿಚಾರಗಳನ್ನಿಲ್ಲಿ ಚಿತ್ರಸಹಿತ ವಿವರಿಸಲಾಗಿದೆ. ಬನ್ನಿ ಬಾನಾಡಿಗಳ ಹಾರುವ ತಂತ್ರಗಳನ್ನು ಅರಿಯೋಣ.
©2024 Book Brahma Private Limited.