`ಕನಕದಾಸ ಅಂಬಿಗರ ಚೌಡಯ್ಯ' ಚಿಕ್ಕಣ್ಣ ಯಣೆಕಟ್ಟೆ ಅವರ ಕೃತಿಯಾಗಿದೆ. ಕನ್ನಡ ಹರಿದಾಸ ಪರಂಪರೆಯಲ್ಲಿ ಕನಕದಾಸರ ಹೆಸರು ಬಹುವಿಶಿಷ್ಟವಾದುದು. 'ಕನಕ' ಎಂಬ ಪದವನ್ನು ಯಾವಕಡೆಯಿಂದ ಓದಿದರೂ ಅದು ಕನಕ ಎಂದೇ ಅರ್ಥವನ್ನು ಕೊಡುತ್ತದೆ. ಹಾಗೇ ಕನಕದಾಸರು ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಿರತೆಯನ್ನು ಹೊಂದಿದವರು. ಅದು ಅವರ ಸಾಹಿತ್ಯದಲ್ಲಿರುವ ಸತ್ವವನ್ನು ಎತ್ತಿತೋರಿಸುತ್ತದೆ. ಅವರ ಸಾಹಿತ್ಯದಲ್ಲಿನ ವಿಚಾರಧಾರೆಗಳು ಆಧ್ಯಾತ್ಮ, ವೈಚಾರಿಕ, ಸಾಮಾಜಿಕ ಕಳಕಳಿಯನ್ನು ಹೊಂದಿರುವಂತವು. ಅವರ ಸಾಹಿತ್ಯ ಕುರಿತು ಹಿಂದೆಯೇ ಹಲವು ಚರ್ಚೆಗಳು ನಡೆಯಬೇಕಾಗಿತ್ತು. ಆದರೆ ಹಲವು ಅಡೆತಡೆಗಳಿಂದ ವಿಳಂಬವಾಗಿಯಾದರೂ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿರುವುದು ಸಂತೋಷತಂದಿದೆ. ಕನಕದಾಸರು ಯಾವುದೇಒಂದು ಜಾತಿ, ಮತ, ಪಂಥ ಪ್ರದೇಶಕ್ಕೆ ಸೀಮಿತವಾದವರಲ್ಲ. ಅವರು ವಿಶ್ವದ ಒಳಿತನ್ನು ಬಯಸಿ ಜೀವಪರ ನಿಲುವು ತಾಳಿ ದಾರ್ಶನಿಕರೆನಿಸಿಕೊಂಡಿದ್ದಾರೆ. ಆದ್ದರಿಂದ ಜಾಗತಿಕ ಮಟ್ಟಕ್ಕೆ ಅವರ ವಿಚಾರಧಾರೆಗಳನ್ನು ಹೊತ್ತೊಯ್ಯಬೇಕಾದ ಅನಿವಾರ್ಯತೆ ಇದೆ. ಆ ಹಿನ್ನೆಲೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಹೊರಪೇಟೆ ಮಲ್ಲೇಶಪ್ಪನವರು ಪ್ರಾಧಿಕಾರದಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಜಂಗಮ-ಸ್ಥಾವರ ಎರಡೂ ನಿಟ್ಟಿನಲ್ಲಿ ಕಾರ್ಯಮಾಡುತ್ತಿರುವುದು ಹೆಮ್ಮೆ ತಂದಿದೆ.
©2024 Book Brahma Private Limited.