ಡಾ. ಯಣ್ಣೆಕಟ್ಟೆ ಚಿಕ್ಕಣ್ಣ ಜಾನಪದ ಮತ್ತು ಮಾನವ ಶಾಸ್ತ್ರೀಯ ಅಧ್ಯಯನದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರು ಪ್ರಸ್ತುತ ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಬುಡಕಟ್ಟು ಸಂಸ್ಕೃತಿ ಅಧ್ಯಯನಕ್ಕೆ ಇವರ ಕೊಡುಗೆ ಅನನ್ಯವಾದುದು. - ವೀರಜುಂಜಪ್ಪ ಸಮಗ್ರ ಕಥಾವಳಿ, ಚಿತ್ರದೇವರ ಕಾವ್ಯ ಈ ಮೊದಲಾದ ಮಹತ್ವದ ಬುಡಕಟ್ಟು ಕಾವ್ಯಗಳನ್ನು ಪ್ರಕಟಿಸಿದ್ದಾರೆ. ಗಡಿನಾಡ ಜಾನಪದ, ತುರುಗೋಳ್ ಜಾನಪದ, ಜಾನಪದ ಸಂಪನ್ನರು, ತುಮಕೂರು ಜಿಲ್ಲೆ ಜಾನಪದೀಯ ನೆಲೆಗಳು ಇವರ ಪ್ರಮುಖ ಸಂಶೋಧನಾ ಕೃತಿಗಳು. 'ಹಿಮ ತಬ್ಬಿದ ನೇಪಾಳ ಕೃತಿಯೂ ಸೇರಿದಂತೆ 'ಬಂಡಿ ಬಂದಾವು ಬಾಳೆ ವನದಾಗೆ' ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಜಾನಪದ, ಸಂಸ್ಕೃತಿ, ವ್ಯಕ್ತಿಚಿತ್ರ ಸೇರಿದಂತೆ ನಲವತ್ತಾರು ಕೃತಿಗಳನ್ನು ಪ್ರಕಟಿಸಿರುವ ಇವರ ಹಲವು ಕೃತಿಗಳು ಪ್ರಶಸ್ತಿ ಗೌರವಗಳಿಗೂ ಪಾತ್ರವಾಗಿವೆ. 'ಜಾಕಾಯಿ-ಜಾಪತ್ತೆ' ಮತ್ತು 'ಬಹುರೂಪಿ ಚೌಡಯ್ಯ' ಕೃತಿಗಳು ಇವರ ಇತ್ತೀಚಿನ ಪ್ರಕಟಣೆಯಾಗಿವೆ.