‘ಚಾಲುಕ್ಯರ ಶಿಲ್ಪಕಲೆ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ಸಂಶೋಧನಾ ಗ್ರಂಥ. ಈ ಬೃಹತ್ ಗ್ರಂಥದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ಈ ಚಿತ್ರಗಳು ಚಾಲುಕ್ಯರ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಪುಸ್ತಕದ ಕಲಾತ್ಮಕ ಪುಟ ವಿನ್ಯಾಸ ಓದುಗರನ್ನು ಸೆಳೆಯುತ್ತವೆ.
ಕೃತಿಗೆ ಬೆನ್ನುಡಿ ಬರೆದಿರುವ ನಳಿನ ಡಿ. ಅವರು, ಜಗತ್ತಿನ ಇತಿಹಾಸ ಕಟ್ಟುವಲ್ಲಿ ಶಿಲ್ಪಗಳು, ಸ್ಮಾರಕಗಳು, ಶಾಸನಗಳು ತಮ್ಮದೇ ಆದ ಕೊಡುಗೆ ನೀಡಿದೆ. ಆದರೂ ಇತಿಹಾಸವೇ ಹಾಗೆ ತಿರುಚುಮಲ್ಲನ ಘೋರ ಕಾಳಗದ ನಡುವೆ ಎಲ್ಲೆಲ್ಲೋ ಸತ್ಯಗಳು ಅಡಗಿರುವುದನ್ನು ಕಾಣಬಹುದು. ಸತ್ಯಶೋಧನೆಗೆ ಒಳಪಡಿಸದೆ ಒಪ್ಪಬಾರದೆಂಬ ತತ್ವಕ್ಕೆ ಕಟ್ಟುಬಿದ್ದವರಿಗೆ ಇತಿಹಾಸವೆಂದು ತಿಳಿದಿದಕ್ಕಿಂತ ಸಂಶೋಧನಾತ್ಮಕವಾಗಿ ಮನಗಾಣುವುದು ಬೆಟ್ಟದಷ್ಟಿರುವುದು. ಹೀಗೆ ಸತ್ಯ ದರ್ಶನದ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಮೂಲಗಳನ್ನು ಜಗತ್ತಿನೆದುರು ತರುವ ಸಾಹಸಕ್ಕೆ ಕೈ ಹಾಕಿದವರು ಕಲವಿದ ಕೆ. ವಿ ಪುಂಡಲೀಕ. ಕಣ್ಣಾ ಮುಚ್ಚೇ ಕಾಡೇ ಗೂಡೇಯಂತೆಯೇ ಓದಿಕೊಂಡಿದ್ದೆಲ್ಲಾ ನಿಜ ಅರಿತುಕೊಂಡವರಿಗೆ ಈ ಪುಸ್ತಕಗಳು ಬಿಚ್ಚಿಡುವ ನಿಜದ ಚರಿತ್ರೆಗಳು ಬೆಚ್ಚಿಬೀಳಿಸುವುದರಲ್ಲಿ ಅಚ್ಚರಿ ಇಲ್ಲ. ಹಿತ್ತಲ ಗಿಡ ಮದ್ದಲ್ಲವೆಂದುಕೊಂಡೇ ನಮ್ಮ ದಿವ್ಯ ಮರೆವಿಗೆ ಸರಿಯುವ ಅದೆಷ್ಟೋ ಸ್ಥಳಗಳ ದೇಗುಲಗಳು, ಪ್ರವಾಸಿ ತಾಣಗಳು, ಸ್ಮಾರಕ, ಸ್ತೂಪಗಳು, ಬೆಟ್ಟ ಗುಡ್ಡಗಳು ಇವರ ಸಂಶೋಧನೆಯ ಕ್ಯಾಮೆರಾಗೆ ಸಿಕ್ಕು ಅಪರೂಪದ ಮಾಹಿತಿ ಶೋಧವಾಗಿ ಕೈಗೆ ಸಿಕ್ಕಾಗ ಕನ್ನಡಿಗನ ಹೃದಯ ಧನ್ಯತೆಯಿಂದ ಮುಗಿಯುವುದು. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇವರ ಸಂಚಾರ ಮಿಂಚಿನಂತೆ ಮಿನುಗಿ ಶಿಲ್ಪಗಳ, ದೇಗುಲಗಳ ಭಿನ್ನ ನೋಟಗಳನ್ನು ಒದಗಿಸಿರುವ ಪರಿ ಆಮೋಘವಾದದ್ದು. ಬಾದಾಮಿ ಐಹೊಳೆ ಪಟ್ಟದಕಲ್ಲು ಮತ್ತು ಮಹಾಕೂಟಗಳ ಮಹಾನ್ ಶಿಲ್ಪಕಲೆಗಳನ್ನೊಳಗೊಂಡ ‘ಚಾಲುಕ್ಯರ ಶಿಲ್ಪಕಲೆ’ ಕೃತಿಯು ಮಹತ್ವವಾಗಿದೆ. ನೈಸರ್ಗಿಕವಾದ ವಿಕೋಪಗಳಿಗೆ ಸಿಲುಕಿ ಮುಂದಾನೊಂದು ಜಿಲ್ಲೆಯಲ್ಲಿಯೂ ಇಂತಹ ಅಪೂರ್ವ ದಾಖಲೀಕರಣದ ಕೃತಿ ಸರ್ಕಾರದ ವತಿಯಿಂದಲೇ ತಯಾರಾಗುವಂತಾಬೇಕು. ಆಗಲೇ ಸಮರ್ಥನಿಯವಾಗಿ ಹಿಂದಿನ ಕೊಡುಗೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಲು ಸಾಧ್ಯವಾಗುವುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.