ಸಾಹಿತಿ, ಪತ್ರಕರ್ತ ತಿ.ತಾ. ಶರ್ಮ ಎಂತಲೇ ಪರಿಚಿತರಾಗಿರುವ ತಿರುಮಲೆ ತಾತಾಚಾರ್ಯ ಶರ್ಮ ಅವರು ಕನ್ನಡ ಸಾಹಿತ್ಯ ಹಾಗೂ ಪತ್ರಿಕಾರಂಗದಲ್ಲಿ ತನ್ನದೇ ಛಾಪು ಮೂಡಿಸಿದವರು. ಇವರು 1897 ಏಪ್ರಿಲ್ 27ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನಿಸಿದರು. ತಾಯಿ ಜಾನಕಿಯಮ್ಮ, ತಂದೆ ಶ್ರೀನಿವಾಸ ತಾತಾಚಾರ್ಯ. ಹುಟ್ಟೂರು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಪಡೆದರು. ಸ್ವಾತಂತ್ಯ್ರ ಚಳವಳಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಪತ್ರಕರ್ತರಾಗಿ ಉದ್ಯೋಗ ಆರಂಭಿಸಿದರು.
ಭಾರತಿ ಕಾವ್ಯನಾಮದ ಮೂಲಕ ಹೆಸರಾಗಿದ್ದ ತಿರುಮಲೆ ರಾಜಮ್ಮ ಅವರು ಇವರ ಬಾಳಸಂಗಾತಿ. ಶಾಸನಗಳಲ್ಲಿ ಕಂಡುಬರುವ ಕನ್ನಡ ಕವಿಗಳು ಶರ್ಮ ಅವರ ಮೊದಲ ಕೃತಿಯಾಗಿದೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದ ಇವರ ಪ್ರಮುಖ ಕೃತಿಗಳೆಂದರೆ ಜ್ಯೂಲಿಯಸ್ ಸೀಸರ್, ಅಶೋಕ ಚಕ್ರವರ್ತಿ, ಸುಭಾಷ್ ಚಂದ್ರ ಬೋಸ್, ಮೋಕ್ಷ ಗುಂಡಂ ವಿಶ್ವೇಶ್ವರಯ್ಯ, ನಾಟಕ ಶಿರೋಮಣಿ, ಕರ್ಮಫಲ, ವಿಚಾರ ಕರ್ನಾಟಕ, ವಿಕ್ರಾಂತ ಭಾರತ ಮುಂತಾದವು. ಇವರು 1973 ಅಕ್ಟೋಬರ್ 20ರಂದು ನಿಧನರಾದರು.