ವಿಂಗ್ ಕಮಾಂಡರ್ ಸುದರ್ಶನರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಗಂಗೂರು ಎನ್ನುವ ಪುಟ್ಟ ಹಳ್ಳಿಯಲ್ಲಿ. ಉಪಾಧ್ಯಾಯರಾಗಿದ್ದ ತಂದೆಯವರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ದಾವಣಗೆರೆಯಲ್ಲಿ ಪಿಯುಸಿ ಮುಗಿಸಿದ ನಂತರ ವಾಯುಸೇನೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಆಯ್ಕೆಯಾದರು. ದೇಶ ಸುತ್ತು ಕೋಶ ಓದು ಎನ್ನುವಂತೆ ವಾಯುಸೇನೆಯಲ್ಲಿ ಭಾರತದಲ್ಲಿ ಇವರು ಸುತ್ತದ ಪ್ರದೇಶಗಳಿಲ್ಲ, ಅಂತೆಯೇ ಕೋಶವನ್ನು ಓದುತ್ತಲೇ ಇವರು ತಮ್ಮ ವೃತ್ತಿವಲಯದಲ್ಲಿ ಹಂತಹಂತವಾಗಿ ಮೇಲೇರುತ್ತಾ ವಾಯುಸೇನೆಯಲ್ಲಿ ಪೈಲಟ್ ಆಗಿ ಮುಂದುವರೆದರು.
ವೈಮಾನಿಕ ಜೀವನದಲ್ಲಿ ಇವರು ಸುಮಾರು ಹದಿನಾಲ್ಕು ವಿವಿಧ ರೀತಿಯ, ಗಾತ್ರದ ವಿಮಾನಗಳನ್ನು ಹಾರಿಸುತ್ತಾ ಹನ್ನೆರಡು ಸಾವಿರ ಗಂಟೆಗಳಿಗೂ ಹೆಚ್ಚಿನ ವಾಯುಯಾನದ ಅನುಭವ ಪಡೆದಿರುತ್ತಾರೆ. ಅಲಹಬಾದ್, ಆಗ್ರಾ, ಅಸ್ಸಾಮಿನ ಗೌಹಾಟಿ, ಜೋರ್ಹಾಟ್, ಭುಜ್, ಹೈದ್ರಾಬಾದ್ ಮತ್ತು ಬೆಳಗಾವಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ. ನೆರೆ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಲ್ಲಿಯೂ ಸಹಾ ಭಾರತೀಯ ಶಾಂತಿಪಡೆಯ ಅಂಗವಾಗಿ ನಡೆದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿರುತ್ತಾರೆ. ಹಸಿರು ಹಂಪೆ ಮತ್ತು ಯೋಧ ನಮನ ಇವರು ಬರೆದಿರುವ ಪುಸ್ತಕಗಳು.