ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಎಸ್.ಎಸ್. ಹಿರೇಮಠ ಅವರು ಬೆಳಗಾವಿ ಜಿಲ್ಲೆಯ ಸಾಣಿಕೊಪ್ಪದವರು. ರಾಯಣ್ಣನ ಸಂಗೊಳ್ಳಿ, ಸಂಗ್ಯಾಬಾಳ್ಯಾದ ಬೈಲವಾಡ, ಬೈಲಹೊಂಗಲ, ಕಿತ್ತೂರು ಪರಿಸರದಲ್ಲಿ ಬರುವ ಊರು ಸಾಣಿಕೊಪ್ಪ. ಬೆಳಗಾವಿಯಲ್ಲಿ ಬಿ.ಎ. ಮತ್ತು ಧಾರವಾಡದಲ್ಲಿ ಎಂ. ಎ ಪದವಿ ಪಡೆದ ನಂತರ ಹಿರೇಮಠರು ಹೊಸಪೇಟೆ, ಹಡಗಲಿ, ಹರಪನಹಳ್ಳಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಪ್ರಗತಿಪರ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ದಲಿತರ ಇತಿಹಾಸ ಮತ್ತು ಸಂಸ್ಕೃತಿ ಪರಂಪರೆಯ ಕುರಿತು ಶೋಧನೆ ನಡೆಸಿದ್ದಾರೆ. ದರ್ಶನಗಳ ಸರಣಿಯಲ್ಲಿ ಪಾಶುಪತ ದರ್ಶನ, ಕಾಳಾಮುಖ ದರ್ಶನ, ಲಾಕುಳ ದರ್ಶನ ಕೃತಿಗಳು ಪ್ರಕಟಗೊಂಡಿವೆ. ಕರ್ನಾಟಕದ ಚರಿತ್ರೆ ಮತ್ತು ಸಂಸ್ಕೃತಿ ಪರಂಪೆಯ ಸಮಗ್ರ ತಿಳುವಳಿಕೆಗೆ ಅಗತ್ಯವಿದ್ದ ದರ್ಶನಗಳ ಅಧ್ಯಯನದ ಗಂಭೀರ ಕೊರತೆಯನ್ನು ಈ ದರ್ಶನ ಮಾಲಿಕೆ ತುಂಬಿ ಕೊಟ್ಟಿದೆ.