About the Author

ಎಂ. ಎಸ್. ಹಿರೇಮಠ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರಗಿಯಲ್ಲಿ 1956 ಜುಲೈ 22 ಜನಿಸಿದರು. ತಂದೆ ಪುರಾಣರತ್ನ ಮಹಾಂತಸ್ವಾಮಿ. ತಾಯಿ ನೀಲಮ್ಮ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟಿದೂರಿನಲ್ಲೇ ಪೂರೈಸಿದ ಅವರು ಬಿ. ಎ. ಪದವಿಯನ್ನು ಕಲಬುರಗಿಯ ಶ್ರೀ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಪಡೆದರು. ಕಲಬುರಗಿಯ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

‘ಶರಣಬಸವೇಶ್ವರರು ಹಾಗೂ ಅವರ ಪರಿಸರದ ಸಾಹಿತ್ಯ’ ಇವರ ಪಿಎಚ್‌.ಡಿ ಮಹಾಪ್ರಬಂಧ.

ರಂಗಭೂಮಿಯಲ್ಲೂ ಆಸಕ್ತಿ ಹೊಂದಿದ್ದ ಹಿರೇಮಠರು ಬೆಂಗಳೂರಿನ ಆದರ್ಶ ಫಿಲಂ ಚಲನಚಿತ್ರ ನಿರ್ದೇಶಕ ಅನುಭವವನ್ನು ಪಡೆದಿದ್ದಾರೆ. ಪದವಿ-ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು 1995ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಅಧ್ಯಾಪಕರಾಗಿ ಪ್ರವೇಶ ಪಡೆದರು. 35 ವರ್ಷದ ಅಧ್ಯಾಪಕ ವೃತ್ತಿಯ ಸುದೀರ್ಘ ಸೇವೆಯ ನಂತರ ನಿವೃತ್ತಿ ಪಡೆದು ಪ್ರಸ್ತುತ ಕಲಬುರಗಿಯಲ್ಲಿ ನೆಲೆಸಿದ್ದಾರೆ.

‘ಬಸವಾದಿ ಶರಣ ಸಾಹಿತ್ಯ ಕೇಂದ್ರ, ನಿಜಶರಣ ಅಂಬಿಗರ ಚೌಡಯ್ಯ ಪೀಠ, ಶ್ರೀ ಶರಣ ಹಡಪದ ಅಪ್ಪಣ್ಣ ಪೀಠ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅಧ್ಯಯನಪೀಠದ ನಿರ್ದೇಶಕರಾಗಿ ಕಾರ್ಯನಿರ್ವಹಣೆ.

ಹಿರೇಮಠರ ಮಾರ್ಗದರ್ಶನದಲ್ಲಿ 17 ವಿದ್ಯಾರ್ಥಿಗಳು ಪಿಎಚ್‌.ಡಿ ಪದವಿ 24 ವಿದ್ಯಾರ್ಥಿಗಳು ಎಂ.ಫಿಲ್‌. ಪದವಿ ಹೊಂದಿದ್ದು ಪ್ರಸ್ತುತ 8 ವಿದ್ಯಾರ್ಥಿಗಳು ಪಿಎಚ್‌.ಡಿ ಅಧ್ಯಯನ ನಡೆಸುತ್ತಿದ್ದಾರೆ.

ತಮ್ಮ ಜೀವಿತಾವಧಿಯಲ್ಲಿ ಹಿರೇಮಠರು 265 ಗ್ರಂಥಗಳನ್ನು ರಚಿಸಿದ್ದು ಐನೂರಕ್ಕೂ ಹೆಚ್ಚಿನ ಲೇಖನಗಳನ್ನು ಬರೆದಿದ್ದಾರೆ. ವೀರಶೈವ ವಚನ ಸಾಹಿತ್ಯ, ಶಾಸನ ಸಾಹಿತ್ಯ ಅವರ ಮತ್ತಿತರ ಆಸಕ್ತಿಯ ಕ್ಷೇತ್ರಗಳು. 60ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ವಿದ್ಯಾರ್ಥಿಗಳು, ಅಭಿಮಾನಿಗಳು, ಒಡನಾಡಿಗಳು ಸಲ್ಲಿಸಿದ ಅಭಿನಂದನ ಗ್ರಂಥ ‘ಶಿವ ಸಂಕಥನ’.

ಎಸ್.ಎಂ. ಹಿರೇಮಠ