ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ ಮತ್ತು ಪ್ರಕಾಶಕರಾಗಿರುವ ರಮಾಕಾಂತ್ ಜೋಶಿ ಅವರು ರಂಗಕರ್ಮಿ, ಲೇಖಕ ಜಿ.ಬಿ. ಜೋಶಿ ಅವರ ಮಗ. ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ನಡೆಸಿಕೊಂಡು ಬಂದಿದ್ದಾರೆ. ತಂದೆ ಜಿ.ಬಿ. ಜೋಶಿ (ಜಡಭರತ) ತಾಯಿ ಪದ್ಮಾವತಿ. ಮೂಲತಃ ಧಾರವಾಡದವರಾದ ರಮಾಕಾಂತ್ ಜೋಶಿ ಅವರು ಪುಸ್ತಕ ಪ್ರಕಾಶನದ ಜೊತೆಗೆ ಲೇಖಕರಾಗಿಯೂ ಗುರುತಿಸಿಕೊಂಡವರು. ಸವಣೂರ ವಾಮನರಾವ್, ಗರುಡ ಸದಾಶಿವರಾವ್, ರಾಘವೇಂದ್ರ ಖಾಸನೀಸ, ದ.ಬಾ. ಕುಲಕರ್ಣಿ, ಎ.ಕೆ.ರಾಮಾನುಜನ್, ಒಂದಷ್ಟು ಹೊಸಕಥೆಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.
ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅದೇ ವಿಶ್ವವಿದ್ಯಾಲಯದಿಂದ “THE USE OF MYTH IN INDIAN ENGLISH DRAMA” ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಗಳಿಸಿದ್ದಾರೆ.
ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ರಮಾಕಾಂತ್ ಜೋಶಿ ಅವರಿಗೆ ‘ಪ್ರಕಾಶಕರ ಒಕ್ಕೂಟದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ’, ‘ಸಂದೇಶ ವಿಶೇಷ ಗೌರವ ಪ್ರಶಸ್ತಿ’, ‘ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ’, ಅಂಕಿತ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.