ರಾ.ಹ.ದೇಶಪಾಂಡೆ ಎಂದೇ ಖ್ಯಾತಿಯ ರಾಮಚಂದ್ರ ಹಣಮಂತರಾಯ ದೇಶಪಾಂಡೆ ಅವರು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದವರು. ‘ಸಿರಿಗನ್ನಡಂ ಗೆಲ್ಗೆ’ ಎಂಬ ಕನ್ನಡ ಅಭಿಮಾನದ ಮಂತ್ರವನ್ನು ನಾಡಿಗೆ ನೀಡಿದವರು ಇವರೆ!
ನರೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಧಾರವಾಡದಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದರು. 1878ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಅವರು ಧಾರವಾಡಕ್ಕೆ ಪ್ರಥಮ ಹಾಗೂ ಮುಂಬೈ ವಿಭಾಗಕ್ಕೆ 21ನೆಯವರಾಗಿ ಉತ್ತೀರ್ಣರಾಗಿದ್ದರು. ವಿದ್ಯಾರ್ಥಿ ವೇತನ ಪಡೆದ ಅವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಸೇರಿ ಇಂಟರ್ ಮೀಡಿಯೇಟ್ ನಲ್ಲಿ ಇಡೀ ಮುಂಬೈ ವಿ.ವಿ.ಗೆ 2ನೇ ಸ್ಥಾನ ಪಡೆದರು. 1882ರಲ್ಲಿ ಬಿ.ಎ. ಉಚ್ಛ ತರಗತಿಯಲ್ಲಿ ಪಾಸಾಗಿದ್ದಕ್ಕೆ ಮುಂಬೈ ಸರ್ಕಾರ ಮತ್ತೇ ಶಿಷ್ಯವೇತನ ನೀಡಿತ್ತು. 1884ರಲ್ಲಿ ಎಂ.ಎ. ಪಾಸಾಗಿ ಚಿನ್ನದ ಪದಕ ಹಾಗೂ 500 ರೂ. ಮೌಲ್ಯದ ಗ್ರಂಥಗಳನ್ನು ಬಹುಮಾನವಾಗಿ ಪಡೆದಿದ್ದರು.
ಇವರ ಶೈಕ್ಷಣಿಕ ಸಾಧನೆ ಗಮನಿಸಿದ ಬ್ರಿಟಿಷ್ ಸರ್ಕಾರ ಬೆಳಗಾವಿಯ ಸರದಾರ ಹೈಸ್ಕೂಲಿಗೆ ಸಹಾಯಕ ಹೆಡ್ ಮಾಸ್ತರ ಎಂದು ನೇಮಿಸಿತ್ತು. ನಂತರ ಧಾರವಾಡದ ಹೈಸ್ಕೂಲಿಗೆ ಹೆಡ್ ಮಾಸ್ತರ ಎಂದು ಬಡ್ತಿ ಪಡೆದರು. ನಂತರ ಬಡ್ತಿ ಮೇಲೆ ಬಡ್ತಿ ಪಡೆದು ಕಾರವಾರ, ಮುಂಬೈ ಹೀಗೆ ಸೇವೆ ಸಲ್ಲಿಸಿದರು. ಮುಂಬೈ ಶಿಕ್ಷಕರ ತರಬೇತಿ ಕಾಲೇಜು ಪ್ರಾಂಶುಪಾಲರಾದರು. ಪ್ಲೇಗ್ ಹಾವಳಿಯಲ್ಲಿಯೂ ಇವರ ಸೇವೆ ಅಬಾಧಿತವಾಗಿತ್ತು. ಆದರೆ, ಕನ್ನಡ ಭಾಷೆಗಾಗಿ ಇವರ ಹೋರಾಟದ ಪರಿಣಾಮ ಅವರು ಊರಿನಿಂದ ಊರಿಗೆ ವರ್ಗವಾಗುವುದು ಸಾಮಾನ್ಯ ಎಂಬಂತಾಗಿತ್ತು.
ವಿದ್ಯಾವರ್ಧಕ ಸಂಘ ಸ್ಥಾಪನೆ: 1890ರಲ್ಲಿ ಕನ್ನಡದ ಕೆಲಸಕ್ಕಾಗಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿ, ಮೊದಲ ಕಾರ್ಯದರ್ಶಿಯಾದರು. ಸಂಘದಿಂದ ವಾಗ್ಭೂಷಣ ಎಂಬ ಮಾಸ ಪತ್ರಿಕೆ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂವಿಧಾನ ರಚನೆಯಲ್ಲಿ ಇವರ ಪಾತ್ರವೂ ಮಹತ್ವದ್ದು. ಧಾರವಾಡದಲ್ಲಿ ಕರ್ನಾಟಕ ಕಾಲೇಜು ನಿರ್ಮಾಣದಲ್ಲಿ ಇವರು ಪ್ರಮುಖರು. ಕರ್ನಾಟಕ ಏಕೀಕರಣದ ಹೋರಾಟದಲ್ಲೂ ಇವರು ಮುಂಚೂಣಿಯಲ್ಲಿದ್ದರು. ಮಹಾತ್ಮ ಗಾಂಧೀಜಿಯ ಖಾದಿ ವಸ್ತ್ರ ಕುರಿತ ವ್ರತವನ್ನು ಕೊನೆಯವರೆಗೂ ಪಾಲಿಸಿದ ಧೀಮಂತರು.
ಕೃತಿಗಳು: ಚೈತನ್ಯ ಚರಿತ್ರೆ, ಗ್ರೇಟ ಬ್ರಿಟನ್ ಅಯರ್ಲ್ಯಾಂಡ ದೇಶಗಳ ಸಂಕ್ಷಿಪ್ತ ವರ್ಣನೆ, ಚರಿತ್ರ ಸಂಗ್ರಹ, ಅಕ್ಬರ ಚಕ್ರವರ್ತಿಯ ಚರಿತ್ರೆ, ಮೊಗಲ ಬಾದಶಾಹಿ, ಭರತಖಂಡದ ಧರ್ಮಸ್ಥಾಪಕರೂ ಧರ್ಮಸುಧಾರಕರೂ, ಬಾಯಿಲೆಕ್ಕದ ಮೊದಲನೆಯ ಪುಸ್ತಕ, ಕಥೆಗಳನ್ನೊಳಗೊಂಡ ಬೀರಬಲ್ಲನ ಚರಿತ್ರೆ (ಪೂರ್ವಾರ್ಧ), ಛತ್ರಪತಿ ಶಿವಾಜಿ ಮಹಾರಾಜ, ಕರ್ನಾಟಕ ಸಾಮ್ರಾಜ್ಯ (ಸಂಪುಟ ೧, ಸಂಪುಟ ೨, ಸಂಪುಟ ೩). ಇವರು 26-04-1931 ರಂದು ನಿಧನರಾದರು.