ಡಾ ಆರ್. ಪೂರ್ಣಿಮಾ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ 35 ವರ್ಷಗಳಿಂದ ಕ್ರಿಯಾಶೀಲವಾಗಿರುವ ಪ್ರತಿಭಾವಂತ ಪತ್ರಕರ್ತೆ ಮತ್ತು ಅಂಕಣಗಾರ್ತಿ. ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಮತ್ತು ಸುವರ್ಣ ಪದಕಗಳ ಮನ್ನಣೆ ಗಳಿಸಿದವರು. ಜನಪರ ಚಳವಳಿಗಳ ಸಾಂಗತ್ಯದಲ್ಲಿ ರೂಪುಗೊಂಡ ವ್ಯಕ್ತಿತ್ವ.ಉದಯವಾಣಿ ಬೆಂಗಳೂರು ಆವೃತ್ತಿಯ ಸಂಪಾದಕ ಸ್ಥಾನದ ಜವಬ್ದಾರಿ ನಿರ್ವಹಿಸಿದ ಪ್ರಥಮ ಮಹಿಳೆ ಎಂಬ ದಾಖಲೆಯನ್ನು ಪಡೆದುಕೊಂಡವರು. ವಿವಿಧ ಕ್ಷೇತ್ರಗಳನ್ನು ಕುರಿತು ಬರೆಯಬಲ್ಲ ಅಧ್ಯಯನಶೀಲ, ವಿಶ್ಲೇಷಣಾತ್ಮಕ ಪ್ರವೃತ್ತಿ, ಪತ್ರಿಕೋದ್ಯಮದ ಸಾಧನೆಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ,ಪುರಸ್ಕಾರಗಳು ಇವರಿಗೆ ಲಭಿಸಿವೆ.
ಪೂರ್ಣಿಮಾ ಆರ್. ಅವರು ಲೇಖಕಿಯಾಗಿಯೂ ಜನಪ್ರಿಯ. ಸ್ನೇಹಸೇತು, ಚಿತ್ತಗಾಂಗ್ ವೀರರು, ಬಾಲರಾಜ್ ಸಾಯ್ಲಿ (ಜೀವನಚಿತ್ರ), ವಚನಕಾರ್ತಿಯರ ದನಿಗಳು, ರಾಜಕೀಯದಲ್ಲಿ ಮಹಿಳಾ ಮೀಸಲಾತಿಯ ಅಗತ್ಯ ಒಂದು ಜೀವನ ಸಾಲದು (ಕುಲದೀಪ್ ನಯ್ಯರ್ ಆತ್ಮಕಥೆಯ ಅನುವಾದ), ಮಣ್ಣಿನ ಕಣ್ಣು (ಅಂಕಣ ಬರಹಗಳ ಸಂಕಲನ)” ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 'ಈವ್ ವೀಕ್ಲಿ ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿ, ಕೆನರಾ ಬ್ಯಾಂಕ್ ಉತ್ತಮ ಗ್ರಾಮೀಣ ವರದಿ ಪ್ರಶಸ್ತಿ 2 ಬಾರಿ, ರಾಜ್ಯ ಪತ್ರಕರ್ತರ ಸಂಘದ ಪಟೇಲ್ ಭೈರ ಹನುಮಯ್ಯ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಜೀ ಕನ್ನಡ ಸಂಸ್ಥೆಯ ಶ್ರೇಷ್ಠ ಪತ್ರಕರ್ತೆ ಪ್ರಶಸ್ತಿ, ಸಿಡಿಎಲ್ ಸಂಸ್ಥೆಯ ಮೀಡಿಯಾ ಮೆಂಟರ್ ಪ್ರಶಸ್ತಿ' ಮತ್ತಿತರ ಪುರಸ್ಕಾರಗಳು ಲಭಿಸಿವೆ.