ಕಥೆಗಾರ್ತಿ ಮಿತ್ರಾವೆಂಕಟ್ರಾಜ್ ಅವರು 1948 ಜುಲೈ 11 ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ರುಕುಮಾಯಿ, ಹಕ್ಕಿ ಮತ್ತು ಅವಳು’ ಅವರ ಕಥಾಸಂಕಲನ, ಮೌಖಿಕ ಲೇಖನಗಳ ಸಂಕಲನ ಬೊಗಸೆಯಲ್ಲಿಟ್ಟು ಬೆಳಕು ತುಂಬಿ, ಮುಗಿಲು ಮಲ್ಲಿಗೆಯ ಎಟಕಿಸಿ ಮುಂತಾದ ಕೃತಿಗಳನ್ನು ರಚಿಸಿದ್ಧಾರೆ. ಕತೆಹೇಳೆ - ಮುಂಬೈ ಲೇಖಕಿಯರ ಕಥಾಸಂಕಲನ), ಬೆಳಕಿನೆಡೆಗೆ - ಮುಂಬೈ ಲೇಖಕಿಯರ ಲೇಖನಗಳ ಸಂಗ್ರಹ ಅವರ ಸಂಪಾದಿತ ಕೃತಿಗಳು. ಒಂದು ಬಸ್ಸಿಗೆ ಒಯ್ಯುವುದಿತ್ತು ಕಥೆಗೆ ದಿಲ್ಲಿಯ ಕಥಾಪ್ರಶಸ್ತಿ, ಹಕ್ಕಿ ಮತ್ತು ಅವಳು ಸಂಕಲನಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಮಹಿಳಾವರ್ಷದ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಹೆಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಕಾಂತಾವರದ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳು ಅವರನ್ನರಸಿ ಬಂದಿವೆ.