ಪತ್ರಿಕೋದ್ಯಮ, ಸಾಹಿತ್ಯ, ಹೋರಾಟ- ಈ ಮೂರೂ ದೋಣಿಗಳಲ್ಲಿ ಪಯಣಿಸುತ್ತಿರುವ ಮಂಜುನಾಥ ಅದ್ದೆ ಅವರದ್ದು ಪ್ರತಿಭಾವಂತ ವ್ಯಕ್ತಿತ್ವ. ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದೆ ಗ್ರಾಮದವರಾದ ಮಂಜುನಾಥ್ ಮೂಲತಃ ಕೃಷಿಕ ಕುಟುಂಬಕ್ಕ ಸೇರಿದವರು. 1973ರ ನಡುಭಾಗದಲ್ಲಿ ಹುಟ್ಟಿದ ಮಂಜುನಾಥ್ ಅವರ ತಂದೆ ಮುನಿಹನುಮಯ್ಯ, ತಾಯಿ-ಲಕ್ಷ್ಮಮ್ಮ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ನಂತರ ಬದುಕಿನ ಮಾರ್ಗದ ಬಗ್ಗೆ ಅವರಿಗೆ ಗೊಂದಲಗಳೇ ಇರಲಿಲ್ಲ. ದೊಡ್ಡಬಳ್ಳಾಪುರದ ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಹೊತ್ತಿಗಾಗಲೇ ಸಮಾಜಮುಖಿ ಚಳವಳಿ, ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಮಂಜುನಾಥ್ ಅದ್ದೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದ್ದರು. ತನ್ನೊಳಗಿನ ವಿಚಾರಗಳನ್ನು ಲೋಕದೊಡನೆ ಹಂಚಿಕೊಳ್ಳಲು ಪತ್ರಿಕೆಯೇ ಸೂಕ್ತ ಅನ್ನಿಸಿದಾಗ ಪತ್ರಿಕೋದ್ಯಮಕ್ಕೆ ನೇರವಾಗಿ ಪ್ರವೇಶಿಸಿದರು.
1997 ರಲ್ಲಿ ಪತ್ರಿಕಾ ಜಗತ್ತಿಗೆ ಕಾಲಿಟ್ಟ ಮಂಜುನಾಥ್ ಅದ್ದೆ ಗುಂಪಿನಲ್ಲಿ ಕರಗಿಹೋಗಲಿಲ್ಲ. ಅಲ್ಲೂ ಅವರು ಪ್ರತ್ಯೇಕವಾಗಿಯೇ ಕಾಣಿಸಿಕೊಂಡರು. ಸರ್ಕಾರ, ರಾಜಕಾರಣ, ಅಧಿಕಾರಶಾಹಿ, ಸಂಸ್ಥೆಗಳು- ಹೀಗೆ ಯಾವುದೇ ಪ್ರಕಾರಕ್ಕೆ ಸೇರಿದ ಅವ್ಯವಹಾರಗಳನ್ನು ನಿರ್ದಾಕ್ಷಿಣ್ಯವಾಗಿ ತಮ್ಮ ಹರಿತ ಬರಹಗಳ ಮೂಲಕ ಒಂದು ನಮೂನೆ ದಾಳಿ ನಡೆಸುತ್ತಲೇ ಬಂದಿದ್ದಾರೆ.
ಮಂಜುನಾಥ್ ಅದ್ದೆ ಅವರಲ್ಲಿನ ಮಾನವೀಯ ಸೆಲೆಯ ಹನಿಗಳನ್ನು ಪುಸ್ತಕಗಳ ಮೂಲಕವೂ ಹೊರಹಾಕಿದ್ದಾರೆ. ‘ಒಡಲ ತುಡಿತಕ್ಕೆ ಕೇಡು’, ‘ಗಾಳಿ-ಗಮಲು’, ‘ಸಾಮುದಾಹಿಕ ಭೂಮಿ ಮತ್ತು ಜನಜೀವನ’, ‘ಕನ್ನಡಿ ಕಣ್ಣು’, ‘ಈತರ್ಕೆ- ಈತರ’, ‘ಕಣ್ಣಂಚಿನ ಚಿತ್ರಗಳು’, ಹಾಗೂ ‘ಮಾತಿಗೆ ಮಾತು’ ಕೃತಿಗಳ ಮೂಲಕ ಅವರ ಚಿಂತನೆ ಧಾರೆಧಾರೆಯಾಗಿ ಹರಿದಿದೆ. ಪತ್ರಕರ್ತನಾಗಿ, ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಖೋ-ಖೋ ಕ್ರೀಡಾಪಟುವಾಗಿ ಬೆಸ್ಟ್ ಜ್ಯೂನಿಯರ್ ಪ್ಲೇಯರ್ ರಾಜ್ಯ ಪ್ರಶಸ್ತಿ ಪಡೆದಿದ್ದ ಮಂಜುನಾಥ್ ಅದ್ದೆಯವರಿಗೆ ಆನಂತರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ಅವರ ‘ಒಡಲ ತುಡಿತಕ್ಕೆ ಕೇಡು’ ಕೃತಿಗೆ 2008ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಗಾಳಿ-ಗಮಲು’ ಕೃತಿಗೆ 2010ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪತ್ರಿಕೋದ್ಯಮದ ಸೇವೆಗಾಗಿ 2014ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ.