About the Author

ಲೇಖಕಿ ಮಲ್ಲಿಕಾ ಘಂಟಿಯವರು ಏಪ್ರಿಲ್ 17, 1959ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಅಗಸಬಾಳದಲ್ಲಿ ಜನಿಸಿದರು. ತಂದೆ ಶಂಕರಪ್ಪ ತಾಯಿ ಪಾರ್ವತಿ ಬಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಹಂಗರಗಿ ಗ್ರಾಮ ಮತ್ತು ಬಾದಾಮಿಯಲ್ಲಿ ಪಡೆದ ಅವರು ವೀರ ಪುಲಿಕೇಶಿ ಹೈಸ್ಕೂಲಿನಲ್ಲಿ  ಪ್ರೌಢ ಶಿಕ್ಷಣ ಮತ್ತು ಪಿ.ಯು ವರೆಗೆ ವಿದ್ಯಾಭ್ಯಾಸ ಮಾಡಿದರು. ಬಾಗಲಕೋಟೆ ಮತ್ತು ಜಮಖಂಡಿ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಬಿ.ಎ.ಪದವಿ. ಧಾರವಾಡದ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಬಿ ಎ, ಎಂ ಎ(1982) ಮತ್ತು ಪಿ ಹೆಚ್ ಡಿ(1992) ಪಡೆದರು. 1987 ರಿಂದ 23 ವರ್ಷ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿದ ಡಾ. ಮಲ್ಲಿಕಾ ಸಂಶೋಧನೆ, ಆಡಳಿತ ಮತ್ತು ಪಾಠ ಈ ಎಲ್ಲಾ ಕ್ಷೇತ್ರಗಳಲ್ಲಿ ಅನುಭವ ಗಳಿಸಿದ್ದಾರೆ.

ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಕೆರೂರು ಎಂ.ಎಚ್.ಎಂ. ಕಿರಿಯ ಮಹಾ ವಿದ್ಯಾಲಯದಲ್ಲಿ. 1983ರಿಂದ 1987ರವರೆಗೆ ಉಪನ್ಯಾಸಕಿಯಾಗಿ ಕೆಲಸಮಾಡಿದ ಅವರು 1987 ರಿಂದ 1994ರವರೆಗೆ ಗುಲಬರ್ಗಾದ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ಹಾಗೂ 1994ರಿಂದ ಸ್ನಾತಕೋತ್ತರ ಕೇಂದ್ರ ಸಂಡೂರಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಮುಂದುವರಿಸಿದ ಮಲ್ಲಿಕಾ ಘಂಟಿಯವರು ಸೆಪ್ಟೆಂಬರ್ 2015 ರಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಪ್ರಕಟಿತ ಕೃತಿಗಳು- ತುಳಿಯದಿರಿ ನನ್ನ, ಈ ಹೆಣ್ಣುಗಳೆ ಹೀಗೆ, ರೊಟ್ಟಿ ಮತ್ತು ಹುಡುಗಿ, ಬೆಲ್ಲದಚ್ಚು ಮತ್ತು ಇರುವೆ ದಂಡು ಕಾವ್ಯಗಳಾದರೆ. ಚಾಜ ಎಂಬ ನಾಟಕವನ್ನು ರಚಿಸಿದ್ದಾರೆ. ಅಹಲ್ಯಾಬಾಯಿ ಹೋಳ್ಕರ್ ಎಂಬ ಜೀವನ ಚರಿತ್ರೆಯನ್ನು ಬರೆದಿರುವ ಮಲ್ಲಿಕಾ ಘಂಟಿಯವರು ಕನ್ನಡದ ಕಥೆಗಾರ್ತಿಯರು, ತನುಕರಗದವರಲ್ಲಿ, ಭೂಮಿಯ ಮೇಲೆ ಎಂಬ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ ಎಂಬ ಮಹಾಪ್ರಬಂಧವನ್ನು ರಚಿಸಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಸಾಧನೆ ಮಾಡಿರುವ ಮಲ್ಲಿಕಾ ಘಂಟಿಯವರ ಸಾಹಿತ್ಯ ಕೃಷಿಗೆ ಮಾಣಿಕಬಾಯಿ ಪ್ರಶಸ್ತಿ, ತನುಕರಗದವರಲ್ಲಿ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿ ಪ್ರಶಸ್ತಿ, ‘ರೊಟ್ಟಿ ಮತ್ತು ಹುಡುಗಿ’ ಕೃತಿಗೆ ಲಿಂಗರಾಜ ಪ್ರಶಸ್ತಿ, ‘ಈ ಹೆಣ್ಣುಗಳೇ ಹೀಗೆ’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ. 

ಮಲ್ಲಿಕಾ ಘಂಟಿ

(17 Apr 1959)

BY THE AUTHOR