About the Author

ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು.

1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ಸಲ್ಲಿಸಿದ್ದಾರೆ. ಶ್ರೀ ರಾಮಕೃಷ್ಣ ವಿವೇಕಾನಂದ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿದ್ದಾರೆ. ಕರ್ನಾಟಕದ ಅರವಿಂದಾಶ್ರಮದ ಶಾಖಾ ಪ್ರಾರಂಭಕ್ಕೆ ಕಾರಣಕರ್ತರಾಗಿದ್ದಾರೆ. ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕದಲ್ಲಿ ಉಳಿಸಲು ಕರ್ನಾಟಕ ಏಕೀಕರಣ ಸಮಿತಿಯ ಸದಸ್ಯರಾಗಿ ದುಡಿದಿದ್ದಾರೆ. ಹಲವಾರು ಕಾರ್ಮಿಕ ಸಂಘಗಳ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಸೇವೆಯನ್ನು ಮೆಚ್ಚಿ ಆತ್ಮೀಯರೆಲ್ಲರು ಸೇರಿ 1988ರಲ್ಲಿ ‘ಕೋಚೆ ಯಾರು ಏನು ಎಂತು?’ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದಾರೆ.  ಸ.ಸ. ಮಾಳವಾಡ ಪ್ರಶಸ್ತಿ, ಸಂ.ಶಿ. ಭೂಸನೂರಮಠ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ, ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಡಿಲಿಟ್ ಪದವಿ, ಇತ್ಯಾದಿ ಇವರಿಗೆ ಸಂದಿವೆ. 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ (2013)ರಲ್ಲಿ ಆಯ್ಕೆಮಾಡಲಾಗಿತ್ತು. 

ನ್ಯಾಯಾಲಯದ ಸತ್ಯ ಕಥೆಗಳು (ಅಂಕಣಬರಹ), ಹಿಂದಿರುಗಿ ಬರಲಿಲ್ಲ, ರಕ್ತತರ್ಪಣ, ಬೇಡಿ ಕಳಚಿತು ದೇಶ ಒಡೆಯಿತು ಮೊದಲಾದ 9 ಕಾದಂಬರಿಗಳನ್ನು; ಅರವಿಂದ, ಬಸವಣ್ಣ ಮೊದಲಾದ 8 ಜೀವನ ಚರಿತ್ರೆಗಳನ್ನು; ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ 5 ಕವನ ಸಂಕಲನಗಳನ್ನು; ಶ್ರೀ ರಾಮಾಯಣ ದರ್ಶನ ಮಹಾಕಾವ್ಯ ಸಮೀಕ್ಷೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಕೃತಿಗಳನ್ನು; ನನ್ನ ಮನಸ್ಸು ನನ್ನ ನಂಬುಗೆ ಎಂಬ ಆತ್ಮಕಥೆಯನ್ನೂ ರಚಿಸಿದ್ದಾರೆ. ಇವರು 2019ರ ಫೆಬ್ರುವರಿ 23 ರಂದು ನಿಧನರಾದರು. 

ಕೋ. ಚೆನ್ನಬಸಪ್ಪ

(27 Feb 1922-23 Feb 2019)

Books by Author

ABOUT THE AUTHOR