ವೈಜ್ಞಾನಿಕ ಲೇಖಕ ಎಂದೇ ಖ್ಯಾತಿ ಪಡೆದ ಕೈವಾರ ಗೋಪಿನಾಥ್ ಹುಟ್ಟಿದ್ದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ. ಜನನ 1943 ಏಪ್ರಿಲ್ 23ರಂದು. ತಂದೆ ಕೈವಾರ ರಾಜಾರಾಯರು, ತಾಯಿ ಕಮಲಾಬಾಯಿ. ಕಲೆಯ ವಾತಾವರಣದಲ್ಲಿ ಬೆಳೆದುಬಂದ ಗೋಪಿನಾಥ್ ಅವರಿಗೂ ಬಾಲ್ಯದಿಂದಲೂ ಸಾಹಿತ್ಯದಲ್ಲಿ ನಂಟು ಬೆಳೆದಿತ್ತು. ನಂತರ ವಿಜ್ಞಾನಕ್ಷೇತ್ರದ ಬರವಣಿಗೆ ಪ್ರಾರಂಭಿಸಿದರು. ಅವರ ವೈಜ್ಞಾನಿಕ ಬಿಡಿ ಬರೆಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಸಂಜೆವಾಣಿ, ಕೋಲಾರ ಪತ್ರಿಕೆ ಮುಂತಾದ ದಿನ ಪತ್ರಿಕೆ, ಹಾಗೂ ಸುಧಾ, ತರಂಗ, ಕರ್ಮವೀರ, ಪ್ರಜಾಮತ ಹೊಸತು, ತುಷಾರ, ಉತ್ಥಾನ ಮುಂತಾದ ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಚಾರ್ಲ್ಸ್ ಡಾರ್ವಿನ್, ಜಾರ್ಜ್‌ಸ್ಟೀವನ್‌ಸನ್, ಮಾರ್ಕೊನಿ, ಎಚ್.ಜಿ.ವೆಲ್ಸ್, ಜಗದೀಶ್ ಚಂದ್ರ ಬೋಸ್, ರೈಟ್ ಬ್ರದರ್ಸ್, ಸುಬ್ರಹ್ಮಣ್ಯನ್ ಚಂದ್ರಶೇಖರ್ ಮುಂತಾದವರ ಜೀವನ ಚರಿತ್ರೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಹಲವಾರು ಸಾಮಾಜಿಕ ಕಥೆ-ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ‘ಯಂತ್ರಮಾನವರ ಬಲೆಯಲ್ಲಿ’ ಎಂಬ ವೈಜ್ಞಾನಿಕ ಕಾದಂಬರಿ ರಚಿಸಿದ್ದಾರೆ. ಸಂಘ-ಸಂಸ್ಥೆಗಳು ನಡೆಸುವ ಸಾಮಾಜಿಕ, ವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿ, ಹಲವಾರು ಬಹುಮಾನಗಳನ್ನೂ ಪಡೆದಿದ್ದಾರೆ.
ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ, ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಅವರಿಂದ 2011-2012ನೇ ಸಾಲಿನ ವಿಜ್ಞಾನ ಸಂವಹನಕಾರ ಪ್ರಶಸ್ತಿ (ಸೈನ್ಸ್ ಕಮ್ಯೂನಿಕೇಟರ್ ಅವಾರ್ಡ್)ಗೆ ಭಾಜನರಾಗಿದ್ದಾರೆ.