ಲೇಖಕ ಕೆ.ಎನ್. ಭಗವಾನ್ ಅವರು (ಜನನ: 1942, ಜೂನ್ 9 ) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶಾವಾರ ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಅಕ್ಕರಾಂಪುರದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ನಂತರ, ತುಮಕೂರಿನ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದರು.
ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಕ್ಕೆ ಸೇರಿದರು. ಎಚ್. ಎ. ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ಸೇವೆ ಸಲ್ಲಿಸಿ ಸೀನಿಯರ್ ಮ್ಯಾನೇಜರ್ ಆಗಿ ನಿವೃತ್ತರಾದರು. ರಂಗಭೂಮಿಯತ್ತಲೂ ಆಸಕ್ತರಾಗಿದ್ದ ಭಗವಾನ್ ಅವರು ಭದ್ರಾವತಿಯಲ್ಲಿ ಇದ್ದ ಸಂದರ್ಭದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 2001ರಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿ, ಈವರೆಗೆ ಸಣ್ಣಕತೆ, ಪ್ರಬಂಧ, ಕವನಸಂಕಲನ, ನಾಟಕ, ಪ್ರವಾಸಕಥನ, ಉದ್ಯಮ ತಂತ್ರಜ್ಞಾನ, ವ್ಯಕ್ತಿಚಿತ್ರ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಭಗವಾನ್ ಅವರ 'ಕಾರ್ಖಾನೆ ಚಿತ್ರಗಳು' ಕೃತಿಗೆ ಗೊರೂರು ಪ್ರತಿಷ್ಠಾನ ಪ್ರಶಸ್ತಿ, 'ಉದ್ಯಮ ಕರ್ನಾಟಕ' ಕೃತಿಗೆ ರಾಮ್ ಜಾಧವ್ ಪ್ರಶಸ್ತಿ, 'ಯದು ವಿಜಯ' ನಾಟಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಮತ್ತು ಒಟ್ಟಾರೆ ಸಾಹಿತ್ಯ ಸಾಧನೆಗಾಗಿ ‘ಅರವಿಂದ ಜೋಷಿ' ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.