About the Author

ಹಿರಿಯ ಗಾಂಧಿವಾದಿ ಡಾ. ಹೊ. ಶ್ರೀನಿವಾಸಯ್ಯ  ಅವರು ಮಂಡ್ಯ ಜಿಲ್ಲೆಯ ಚೌದರೀಕೊಪ್ಪಲಿನವರು.  ತಂದೆ ಹೊನ್ನಪ್ಪ. ತಾಯಿ ತಿಮ್ಮಮ್ಮ. ಹೈಸ್ಕೂಲಿನಲ್ಲಿದ್ದಾಗಲೇ ಶಾಲೆಯಿಂದ ಹೊರಡಿಸುತ್ತಿದ್ದ ‘ವನಸುಮ’ ಎಂಬ ಪತ್ರಿಕೆಗೆ ಭಗವದ್ಗೀತೆಯ ತಾತ್ಪರ್ಯ, ಗೀತೆಯ ಸಂದೇಶದ ವಿಚಾರವಾಗಿ ಲೇಖನ ಮತ್ತು ಗೀತೋಪದೇಶದ ಚಿತ್ರಗಳನ್ನು ಬರೆಯುತ್ತಿದ್ದರು. ಭಾರತ್‌ ಅರ್ಥ್‌ ಮೂವರ್‍ಸ್‌‌ (ಲಿ) ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಅವರು  ಸದ್ಯ ನಿವೃತ್ತರು.  ಪ್ರಕೃತಿ ಜೀವನ ಕೇಂದ್ರದ ಸ್ಥಾಪಕರಾಗಿರುವ ಅವರು ಗಾಂಧಿ ಸಾಹಿತ್ಯ ಸಂಘ ಮತ್ತು ಸಿದ್ದವನಹಳ್ಳಿ ಕೃಷ್ಣರರ್ದ ಸ್ಮಾರಕ ಸಮಿತಿಗಳ ನಿಕಟ ಸಂಪರ್ಕದಲ್ಲಿದ್ದವರು. ಎಂಜಿನಿಯರ್‌ ಆಗಿದ್ದ ಅವರು ರಚಿಸಿದ ‘ನಾ ಕಂಡ ಜರ್ಮನಿ' ಪ್ರವಾಸ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.

ಪ್ರಕೃತಿ ಚಿಕಿತ್ಸಾ ವಿಧಾನದಲ್ಲಿ ಅಪಾರ ಆಸಕ್ತಿ, ಪಾಂಡಿತ್ಯ ಹೊಂದಿದ್ದ ಇವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ‘ಪ್ರಕೃತಿ ಜೀವನ ಟ್ರಸ್ಟ್‌’ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ. ಪ್ರಕೃತಿ ಜೀವನದ ಮಹತ್ವವನ್ನು ತಿಳಿಸಲು ಹಲವಾರು ಕಡೆ ಭಾಷಣಗಳ ಮೂಲಕ, ತರಗತಿಗಳನ್ನು ನಡೆಸುವುದರ ಮೂಲಕ, ಪುಸ್ತಕಗಳನ್ನು ಬರೆದು ಪ್ರಕಟಿಸುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದರು. 

‘ಆರೋಗ್ಯವೇ ಭಾಗ್ಯ’, ‘ಆರೋಗ್ಯಶಾಸ್ತ್ರ ಪರಿಚಯ’, ‘ಪ್ರಕೃತಿದತ್ತ ಆರೋಗ್ಯ’, ‘ಯೋಗ ನಿದ್ರೆ’ ಮತ್ತು ‘ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ’ - ಪ್ರಕೃತಿ ಚಿಕಿತ್ಸೆ ಕುರಿತು ಅವರು ಬರೆದ ಪ್ರಮುಖ ಕೃತಿಗಳು. ‘ಶ್ರೀಲಂಕಾ’, ‘ಸಿಂಹಳದಲ್ಲಿ ಶಶಿ’, ‘ಶಶಿಕಂಡಜರ್ಮನಿ’, ‘ನಾ ಕಂಡ ಜರ್ಮನಿ’, ‘ಜಯಶ್ರೀ ಕಂಡ ಜಗತ್ತು’ ಅವರ ಪ್ರವಾಸ ಕಥನಗಳು. ಅಲ್ಲದೆ  ಪ್ರಕೃತಿ ಚಿಕಿತ್ಸಾಚಾರ್ಯ ಲಕ್ಷ್ಮಣ ಶರ್ಮಾ, ಶಿಸ್ತಿನ ಸೇವಕ ಹರ್ಡಿಕರ್‌ (ಜೀವನ), ಪ್ರಕೃತಿ ಜೀವನ ಏನು, ಹೇಗೆ (ವೈಚಾರಿಕ), ಶಶಿ ಕಂಡ ಜರ್ಮನಿ, ಸಿಂಹಳದಲ್ಲಿ ಶಶಿ (ಬಾಲ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಅವರ ಈ ಸಾಹಿತ್ಯ ಸೇವೆಗೆ ಕರ್ನಾಟಕ ಸರಕಾರದ ಪತಂಜಲಿ ಸುವರ್ಣ ಪದಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದೆಹಲಿಯ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಗೌರವ ಡಾಕ್ಟರೇಟ್‌ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

 

ಹೊ. ಶ್ರೀನಿವಾಸಯ್ಯ

(04 Jan 1925)