ಎಚ್.ವೈ.ರಾಜಗೋಪಾಲ್ - 1960ರ ದಶಕದಲ್ಲೇ ಅಮೆರಿಕಕ್ಕೆ ತೆರಳಿದ ರಾಜಗೋಪಾಲ್ ಅವರು ಅಲ್ಲಿನ ಕನ್ನಡ ಸಮಾಜದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅಲ್ಲದೆ ಅನೇಕ ಭಾರತೀಯ ಸಂಸ್ಥೆಗಳ ಸ್ಥಾಪಕರೂ, ಕಾರ್ಯಮಂಡಲಿಯ ಸದಸ್ಯರೂ ಆಗಿ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯಕ್ಕೇ ಮೀಸಲಾದ ಅಮೇರಿಕಾದ ಏಕೈಕ ರಾಷ್ಟ್ರೀಯ ಸಂಸ್ಥೆಯಾದ ಕನ್ನಡ ಸಾಹಿತ್ಯ ರಂಗದ ಸ್ಥಾಪಕ ಸದಸ್ಯರಲ್ಲೊಬ್ಬರು. ಹಲವಾರು ವರ್ಷ ಅದರ ಕಾರ್ಯಕಾರೀ ಸಮಿತಿಯ ಅಧ್ಯಕ್ಷರಾಗಿಯೂ ಆನಂತರ ಅದರ ಆಡಳಿತ ಮಂಡಲಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಲೇಖನಗಳು ಅಮೆರಿಕದ ಹಾಗೂ ಕರ್ನಾಟಕದ ಹಲವಾರು ಸಂಕಲನಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಪ್ರಕಾಶಗೊಂಡಿವೆ. ಅವರು ಸಹಸಂಪಾದಕರಾಗಿ ಹೊರತಂದ ಕೃತಿ ನಗೆಗನ್ನಡಂ ಗೆಲ್ಗೆ ಅನೇಕ ಓದುಗರ, ವಿದ್ವಾಂಸರ ಮೆಚ್ಚುಗೆ ಗಳಿಸಿದೆ. 2011ರಲ್ಲಿ ಅವರ ಮತ್ತೊಂದು ಕೃತಿ ಗಾಂಧಿಯುಗಕ್ಕೆ ಕನ್ನಡಿ ಎಂಬ ಪ್ರಬಂಧ ಸಂಕಲನ ಪ್ರಕಟಗೊಂಡಿತು. ಹೊರನಾಡಿನಲ್ಲಿ ಕನ್ನಡಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ 2007ರಲ್ಲಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನಿತ್ತು ಸನ್ಮಾನಿಸಿದೆ. ಅಲ್ಲದೆ 2013ರಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ತನ್ನ ವಿದೇಶ ವಿಭಾಗದ ಸನ್ಮಾನವನ್ನು ಇತ್ತಿದೆ. ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನೀರಿಂಗ್, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಗಳಲ್ಲಿ ಇಂಜಿನೀರಿಂಗ್ ವಿಭಾಗದಲ್ಲಿ ಕ್ರಮವಾಗಿ ಬಿ.ಇ.ಎಂ.ಇ ಮತ್ತು ಪಿಎಚ್.ಡಿ.ಪದವಿಗಳನ್ನು ಪಡೆದು Raytheon engineers& constructors ಕಂಪೆನಿಯಲ್ಲಿ consulting engineer ಆಗಿಯೂ, ವಿಲನೋವಾ ವಿಶ್ವವಿದ್ಯಾಲಯದಲ್ಲಿ Adjinct professor ಆಗಿಯೂ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಕನ್ನಡದ ಹಿರಿಯ ಲೇಖಕಿ, ಜಾನಪದ ಗಾಯಕಿ ಎಂದು ಹೆಸರು ಪಡೆದಿರುವ ಪತ್ನಿ ವಿಮಲಾ ರಾಜಗೋಪಾಲರೊಂದಿಗೆ ಮೀಡಿಯಾ, ಪೆನ್ಸಿಲ್ವೀನಿಯದಲ್ಲಿ ವಾಸವಾಗಿದ್ದಾರೆ.