ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೋರೆಸ್ವಾಮಿ. ಹಾರೋಹಳ್ಳಿಯಲ್ಲಿ ಜನಿಸಿದ ದೊರೆಸ್ವಾಮಿ ತಮ್ಮ 5ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ಆ ಬಳಿಕ ಅಜ್ಜನ ಬಳಿ ಬೆಳೆದ ಅವರು ಹಾರೋಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಮಹಾತ್ಮ ಗಾಂಧಿ ‘ಮೈ ಅರ್ಲಿ ಲೈಫ್’ ಪುಸ್ತಕವನ್ನು ಓದಿ ಅದರಿಂದ ಪ್ರಭಾವಿತರಾದ ದೊರೆಸ್ವಾಮಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿದರು. ಕಾಲೇಜು ಶಿಕ್ಷಣದ ಜೊತೆಗೆ ಸ್ವತಂತ್ರ್ಯ ಹೋರಾಟದಲ್ಲೂ ಭಾಗಿಯಾಗುತ್ತಿದ್ದ ದೊರೆಸ್ವಾಮಿ 1942ರ ಹೊತ್ತಿಗೆ ತಮ್ಮ ಬಿ.ಎಸ್.ಸಿ ಪೂರ್ಣಗೊಳಿಸಿ ಉಪನ್ಯಾಸಕ ವೃತ್ತಿ ಆರಂಭಿಸಿದರು.
ಅದೇ ವರ್ಷ ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಚಳುವಳಿ ಆರಂಭವಾಯಿತು. ಅಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಅವರ ಸಹೋದರ ಹೆಚ್. ಎಸ್. ಸೀತಾರಾಮ್ ಅವರ ಜೊತೆಯಲ್ಲಿ ಸರ್ದಾರ್ ವೆಂಕಟರಾಮಯ್ಯ ಮತ್ತು ಎ.ಜಿ.ರಾಮಚಂದ್ರ ರಾವ್ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಒಟ್ಟಿಗೆ ಚಲಿಸಬೇಕೆಂದು ನಿರ್ಧರಿಸಿದ್ದರು. ಸರ್ಕಾರಿ ದಾಖಲೆಗಳನ್ನು ಹಾನಿ ಮಾಡಲು ಬಳಸಬಹುದಾದ ಟೈಂ ಬಾಂಬ್ ತಯಾರಿಸವು ಅವರು ತೊಡಗಿದ್ದರು. ಈ ಕಾರಣದಿಂದಾಗಿ ದೊರೆಸ್ವಾಮಿ 14 ತಿಂಗಳ ಕಾಲ ಮೊದಲ ಬಾರಿಗೆ ಜೈಲು ಸೇರಿದರು. ಜೈಲಿನಲ್ಲಿದ್ದಾಗ ಅವರು ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಸತ್ಯಾಗ್ರಹದ ದಾರಿಯನ್ನು ಅನುಸರಿಸಲು ನಿರ್ಧರಿಸಿದರು. ಬಿಡುಗಡೆಯ ನಂತರ ಪುಸ್ತಕ ಮಳಿಗೆ ಮತ್ತು ಪ್ರಕಾಶನ ಡಿಪೋವನ್ನು ಸ್ಥಾಪಿಸಿದರು. ಅಲ್ಲಿ ಆರ್. ಕೆ. ನಾರಾಯಣ್ ಮತ್ತು ಕೆ.ಎಸ್. ನರಸಿಂಹಸ್ವಾಮಿ ಆಗಾಗ ಸಂದರ್ಶಕರಾಗಿದ್ದರು.
ಆ ದಿನಗಳಲ್ಲಿ ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಿತು. 1947ರಲ್ಲಿ ಮೈಸೂರು ಚಲೋ ಚಳುವಳಿಯಲ್ಲಿ ಅವರ ಪತ್ರಿಕೆಯು ಸರ್ಕಾರದ ವಿರುದ್ಧ ಅನೇಕ ಲೇಖನಗಳನ್ನು ಪ್ರಕಟಿಸಿತು. ಅಂತಿಮವಾಗಿ , ಸರ್ಕಾರ ಪತ್ರಿಕಾ ನಿಯಂತ್ರಣದ ಮೂಲಕ ಪ್ರಕಾಶನವನ್ನು ವಶಪಡಿಸಿಕೊಂಡಿತು. ದೊರೆಸ್ವಾಮಿಯವನ್ನು ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಯುವಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರತರಾದರು.