ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ಕಣ್ಣೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯಲ್ಲಿ ಅಧ್ಯಕ್ಷರಾಗಿದ್ದವರು.
’ವಿನಾಯಕ ಸಮುದ್ರ ಗೀತೆಗಳು', 'ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಚಿತ್ರಗಳು', "ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ', 'ಪ್ರೊ. ಎಂ.ಮರಿಯಪ್ಪ ಭಟ್-ಜೀವನ ಸಾಧನೆ', 'ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಯುದ್ದವರ್ಣನೆಗಳು - ಇವು ಅನನ್ಯ ಕೊಡುಗೆಗಳು. “ಕರ್ಲಮಂಗಲಂ ಶ್ರೀಕಂಠಯ್ಯನವರ ಲೇಖನಗಳು, 'ಸಮರಸ', 'ವಿವಾಹ ನಾಟಕ, ’ನವನಾಥ ಕಥಾ ಮತ್ತು ಚರ್ಪಟನಾಥ ಶತಕ', 'ಕನ್ನಡ ರಾಮಾಯಣ ಗ್ರಂಥ ಸೂಚಿ', 'ಕಾರಂತ ಸ್ಮರಣೆ ೧', 'ಕಡವ ಶಂಭು ಶರ್ಮ ಕೃತಿ ಸಂಚಯ 1,2,3,4 'ಕಡವ ಶಂಭು ಶರ್ಮ ಅನುವಾದಿಸಿದ ಕದಲಿ ಮಂಜುನಾಥ ಮಾಹಾತ್ಮ', 'ಕಡವ ಶಂಭು ಶರ್ಮರ ಶ್ರೀಮದ್ಭಗವದ್ಗೀತಾ', 'ನೆಲದ ಬದುಕು' ಹಾಗೂ 'ಭಾರತೀಸುತರ ಕಾದಂಬರಿಗಳು ಮತ್ತು ಸಾಮಾಜಿಕ ಸಂದರ್ಭ ಇವರ ಸಂಪಾದಕತ್ವದಲ್ಲಿ ಪ್ರಕಟವಾದ ಕೃತಿಗಳು.