ಜೀ.ಶಂ. ಪರಮಶಿವಯ್ಯ 'ಜೀಶಂಪ' ಎಂಬ ಸಂಕ್ಷಿಪ್ರನಾಮದಿಂದಲೇ ಚಿರಪರಿಚಿತರು. ಜೀರಹಳ್ಳಿ ಶಂಕರೇಗೌಡ ಪರಮಶಿವಯ್ಯನವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ (ಜನನ: 12-11-1933) ಅಂಬಲ ಜೀರಹಳ್ಳಿಯವರು. ಮೈಸೂರಿನಲ್ಲಿ ತಮ್ಮ ಉನ್ನತ ವ್ಯಾಸಂಗವನ್ನು ಮುಗಿಸಿ ಕನ್ನಡ ಎಂ.ಎ. ಪದವಿಯ ಜೊತೆಗೆ ಜಾನಪದದಲ್ಲಿ ಪಿಎಚ್.ಡಿ. ಪಡೆದರು.
ಮೈಸೂರಿನ ಜೆ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಮುಂದೆ ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಜಾನಪದ ಪ್ರಾಧ್ಯಾಪಕರಾಗಿ, ಕುಲಪತಿಗಳ ಆಪ್ತ ಕಾರ್ಯದರ್ಶಿ ಯಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೆಶಕರಾಗಿದ್ದರು.
ಜಾನಪದ ಕ್ಷೇತ್ರದಲ್ಲಿ ಅವರ ಸಾಧನೆ ಅದ್ವಿತೀಯ. ಕರ್ನಾಟಕದಾದ್ಯಂತ ಸಂಚರಿಸಿ ಹೊಸ ಹೊಸ ಜಾನಪದ ಕಾವ್ಯಸಂಪ್ರದಾಯಗಳನ್ನು, ಕಲಾಸಂಪ್ರದಾಯಗಳನ್ನು, ಬೇರೆ ಬೇರೆ ಜಾನಪದ ಪ್ರಕಾರಗಳನ್ನು ಬೆಳಕಿಗೆ ತಂದರು. ಸಂಗ್ರಹ, ಸಂಶೋಧನೆ ಹಾಗೂ ಅಧ್ಯಯನ ಕಾರ್ಯಗಳಲ್ಲಿ ಸದಾ ತಮ್ಮನ್ನು ತೊಡಗಿಸಿ ಕೊಂಡ ಇವರು 85ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮೂರು ಬಾರಿ ವಿದೇಶಗಳಲ್ಲಿ ಪ್ರವಾಸ ಮಾಡಿ ಇಲ್ಲಿಯ ಜಾನಪದ ಜ್ಞಾನಸಂಪತ್ತಿನ ಪ್ರಸಾರ ಮಾಡಿದ್ದಾರೆ.
ಜೀ.ಶಂ.ಪ. ಸ್ನೇಹಪರವ್ಯಕ್ತಿ, ಸರಳಜೀವಿ. ಜಾನಪದ ವಸ್ತು ಸಂಗ್ರಹಾಲಯ ನಿರ್ಮಾಣದಲ್ಲಿ, ಮೂಡಲಪಾಯ ಯಕ್ಷಗಾನ ಪುನರುಜ್ಜೀವನ ಕಾರ್ಯದಲ್ಲಿ, ಕರ್ನಾಟಕ ಜನಪದ ಕಲೆಗಳ ಸಂಘಟನೆಯಲ್ಲಿ ಇವರದು ಮಹತ್ವದ ಪಾತ್ರ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು 17-06-1995 ರಂದು ನಿಧನರಾದರು.