About the Author

ಅನುವಾದಕ ಶ್ರೀನಾಥ್‌ ಅವರು ಹುಟ್ಟಿದ್ದು 1950 ಡಿಸೆಂಬರ್‌ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್‌, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. 

ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ"  ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ಗೊಂಬೆ, ಮಂತ್ರವಾದಿಯೂ ಅವನ ಮಂತ್ರವೂ, ಸ್ವಪ್ನಭಂಗ, ಬಟ್ಟಲಿನಲ್ಲಿ ಬಿರುಗಾಳಿ, ಹೆಬ್ಬಾವು ಮತ್ತು ಸೂತ್ರದ ಬೊಂಬೆ, ಒಂದು ಮನೆಯ ಕಥೆ, ಎರಡು ಹೆಣ್ಣು ಮತ್ತು ಒಂದು ಗಂಡು, ಹಳದಿ ಹೂ ಮತ್ತು ಮೂರನೆಯ ಸಾಕ್ಷಿದಾರ (ಕಾದಂಬರಿಗಳು) ಶಿಶಿರ, ರೋಗಗ್ರಸ್ತ ನಗರಿ, ಅಭಿಜ್ಞಾನ, ಅಂತಿಮ ಪಣ, ಹಿಂದಿಯ (ನೀಳ್ಗತೆ) ಲಬಂಗಿ, ಅದೆಷ್ಟು ಪಾಕೀಸ್ತಾನ, ಸ್ವರ್ಗದಲ್ಲಿ ಮಂತ್ರಿ (ಹಿಂದಿಯ ವ್ಯಂಗ್ಯ ಪ್ರಧಾನ ಕಾದಂಬರಿ), ರಾಜಕುಮಾರ ಮತ್ತು ಕಿರೀಟ, ಮೂಗಿನ ವೈದ್ಯ, ರಸಿಕ ನವಾಬ (ಮಕ್ಕಳ ಕಾದಂಬರಿಗಳು), ನ್ಯಾಯ ಮತ್ತು ಇತರ ಕಥೆಗಳು, ಅವನ ಆತ್ಮಹತ್ಯೆ ಮತ್ತು ಇತರ ಹಿಂದಿ ಕಥೆಗಳು (ಕಥಾ ಸಂಕಲನಗಳು), ಕುರುಡ ಮತ್ತು ಗೂನ, ನೀಲಿ ತಲೆಯ ಬಾಲಕರು, ಜಂಬದ ರಾಜ, ಬಂಗಾರದ ಚಿತ್ತ, ವಿಚಿತ್ರನ್ಯಾಯ, ಮಕ್ಕಳ ಮಾಯಾಲೋಕ, ಮುರಿದ ರೆಕ್ಕೆ ಮತ್ತು ಏಶಿಯಾದ ಇತರ ಕಥೆಗಳು (ಮಕ್ಕಳ ಜಾನಪದ ಕಥಾಸಂಕಲನಗಳು) ಮುಂತಾದವು. 

ಕರ್ನಾಟಕ ಸರ್ಕಾರದ ಅಹಿಂದಿ ಭಾಷಾ ಲೇಖಕರ ಪುರಸ್ಕಾರ, ಗೊರೂರು ಸಾಹಿತ್ಯ ಪ್ರಶಸ್ತಿ, ಮಧ್ಯಪ್ರದೇಶ್ ರಾಷ್ಟ್ರಭಾಷಾ ಸಮಿತಿ, ಭೂಪಾಲ್ ಅವರ ಲೇಟ್ ಹಜಾರಿಲಾಲ್ ಜೈನ್ ಸ್ಮೃತಿ ಸಮ್ಮಾನ್, ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ಅನುವಾದ ಪ್ರಶಸ್ತಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕಮಲ ಗೋಯರಿಕಾ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಒಲಿದು ಬಂದಿವೆ.

ಡಿ.ಎನ್‌. ಶ್ರೀನಾಥ್‌

(03 Dec 1950)