ಚಲಂ ಹಾಡ್ಲಹಳ್ಳಿ ಅವರ ಮೂಲ ಹೆಸರು ಪ್ರಸನ್ನ ಕುಮಾರ್ ಹೆಚ್.ಎನ್. ತಂದೆ- ಹಾಡ್ಲಹಳ್ಳಿ ನಾಗರಾಜ್, ತಾಯಿ- ಭವಾನಿ. ಹಾಡ್ಲಹಳ್ಳಿ ಅವರ ಊರು. ಕವಿಯಾಗಿ, ಕತೆಗಾರರಾಗಿ, ಜೊತೆಗೆ ರಂಗಭೂಮಿಯಲ್ಲಿಯೂ ತೊಡಗಿಕೊಂಡಿರುವ ಚಲಂ ಅವರ ಮೊದಲ ಕತಾಸಂಕಲನ ‘ಪುನರಪಿ’. ಅದಕ್ಕೂ ಮೊದಲು ’ಅವಳ ಪಾದಗಳು’ ಎಂಬ ಕವನ ಸಂಕಲನ ಪ್ರಕಟಗೊಂಡಿತ್ತು. ನಾನಾ ಪತ್ರಿಕೆಗಳಿಗೆ ಕತೆ, ಕವನ, ಲೇಖನಗಳನ್ನು ಬರೆದಿರುವ ಅವರ ಹಲವಾರು ನಾಟಕ ಪ್ರದರ್ಶನಗಳಿಗೆ ದುಡಿದಿದ್ದಾರೆ. ಹಾಸನದ ಜೇನುಗಿರಿ ಎಂಬ ದಿನಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ಜಾಣಗೆರೆ ಪತ್ರಿಕೆ, ಅಗ್ನಿ, ಗೌರಿಲಂಕೇಶ್, ಜನತಾಮಾದ್ಯಮ, ಜನಮಿತ್ರ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ಉಸ್ತುವಾರಿ ವಹಿಸಿದ್ದಾರೆ. ‘ಎಲ್ಲಾ ಮೀನುಗಳೂ ಗಾಳಕ್ಕೆ ಸಿಕ್ಕುವುದಿಲ್ಲ’ ಎಂಬ ಮತ್ತೊಂದು ಕಥಾ ಸಂಕಲನ ಪ್ರಕಟವಾಗಿದೆ.