ಲೇಖಕಿ, ಅಂಕಣಕಾರ್ತಿ ಭಾರತೀದೇವಿ ಪಿ. ಅವರು ಮೂಲತಃ ಮೂಡುಬಿದರೆಯವರು. 1983 ಮಾರ್ಚ್ 19 ರಂದು ಜನಿಸಿದ ಭಾರತೀದೇವಿಯವರು ಪ್ರಾಥಮಿಕ ಶಿಕ್ಷಣವನ್ನು ಮೂಡುಬಿದರೆಯಲ್ಲಿಯೇ ಪೂರ್ಣಗೊಳಿಸಿದರು. ಆನಂತರ ಉಜಿರೆ ಹಾಗೂ ಚೆನ್ನೈನಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಅವರು ಪ್ರಸ್ತುತ ಹಾಸನದ ಹೊಳೆನರಸೀಪುರದ ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಭಾರತೀದೇವಿ ಅವರು ನಿಲ್ಲಿಸಬೇಡ ಯಾವುದನ್ನು, ಪಿಯರ್ ಬೋರ್ದು ವಿಚಾರಗಳು, ಮಹಿಳೆ ಮತ್ತು ದೇಹರಾಜಕಾರಣ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಆಂದೋಲನಯ ಪತ್ರಿಕೆಗೆ ಅಂಕಣಗಳನ್ನೂ ಬರೆಯುತ್ತಾರೆ . ಸಾಹಿತ್ಯ ಕ್ಷೇತ್ರದ ಅವರ ಸಾಧನೆಗಳಿಗೆ ಕನ್ನಡ ಸಂಘದ ಪ್ರಶಸ್ತಿ, ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ದತ್ತಿ ನಿಧಿ ಬಹುಮಾನ ಸೇರಿದಂತೆ ಹಲವು ಗೌರವ, ಪ್ರಶಸ್ತಿಗಳು ಲಭಿಸಿವೆ.