ಬಿ.ವಿ. ಕಕ್ಕಿಲ್ಲಾಯರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರು, ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರು.
ಉತ್ತರ ಕೇರಳದ ಕಾಸರಗೋಡು ತಾಲೂಕಿನ ಚೆರ್ಕಳದ ಸಮೀಪ, ಪಯಸ್ವಿನಿ ನದಿಯ ದಂಡೆಯ ಮೇಲಿರುವ ಬೇವಿಂಜೆಯಲ್ಲಿ ಶ್ರೀಮಂತ ಭೂಮಾಲಕರಾಗಿದ್ದ ವಿಷ್ಣು ಕಕ್ಕಿಲ್ಲಾಯರ ಕೊನೆಯ ಮಗನಾಗಿ ಏಪ್ರಿಲ್ 9, 1919 ರಂದು ಬಿ. ವಿ ಕಕ್ಕಿಲ್ಲಾಯ ಜನಿಸಿದರು.
ಕಾಸರಗೋಡಿನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದ ಬಳಿಕ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜನ್ನು ಸೇರಿದ ಬಿ ವಿ ಕಕ್ಕಿಲ್ಲಾಯರು ಆ ಕಾಲದಲ್ಲಿ ಉತ್ತುಂಗದಲ್ಲಿದ್ದ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಮಲಬಾರ್ ಪ್ರಾಂತ್ಯದಿಂದ ಮಂಗಳೂರಿಗೆ ಆಗಗ ಭೇಟಿ ನೀಡಿ ಕಾರ್ಮಿಕ ವರ್ಗದ ಸಂಘಟನೆಯಲ್ಲಿ ನಿರತರಾಗಿದ್ದ ಕಮ್ಯೂನಿಸ್ಟ್ ಪಕ್ಷದ ನಾಯಕರಿಂದ ಪ್ರಭಾವಿತರಾದ ಕಕ್ಕಿಲ್ಲಾಯರು ಕಮ್ಯೂನಿಸ್ಟ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾಗಿದ್ದ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ಸದಸ್ಯರಾಗಿ ಕೆಲವೇ ಸಮಯದಲ್ಲಿ ಅದರ ದಕ ಜಿಲ್ಲಾ ಕಾರ್ಯದರ್ಶಿಯಾದರು.
ಸ್ವಾತಂತ್ರ್ಯಾನಂತರದ ದಿನಗಳಲ್ಲೂ ರೈತಕಾರ್ಮಿಕರ ಮೇಲೆ ಮುಂದುವರೆದಿದ್ದ ದಬ್ಬಾಳಿಕೆಗಳನ್ನೂ, ತೀವ್ರ ಶೋಷಣೆಯನ್ನೂ ಎದುರಿಸಿ ಅವರನ್ನು ಸಂಘಟಿತ ಹೋರಾಟಗಳಿಗೆ ಅಣಿನೆರೆಸುವ ಕಾರ್ಯವನ್ನು ಕಕ್ಕಿಲ್ಲಾಯರೂ, ಅವರ ಸಂಗಾತಿಗಳೂ ಮುಂದುವರೆಸಿದ್ದರು.
ಕಕ್ಕಿಲ್ಲಾಯರು, ಜಾತ್ಯಾತೀತವಾದ, ಕೋಮು ನಿರಪೇಕ್ಷವಾದ, ಸರ್ವರಿಗೂ ಸಮಬಾಳನ್ನು ನೀಡಬಲ್ಲ ಪ್ರಗತಿಪರ, ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು, ಕೊನೆ ತನಕ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು.
ಅವರು ತಮ್ಮ ಆತ್ಮ ಚರಿತ್ರೆ ‘ಬರೆಯದ ದಿನಚರಿಯ ಮರೆಯದ ಪುಟಗಳು’ ಕೃತಿ ಸಹಿತ ಕಾರ್ಲ್‌ಮಾರ್ಕ್ಸ್, ಫ್ರೆಡರಿಕ್ ಏಂಜಲ್ಸ್ ಮತ್ತಿತರ ಪುಸ್ತಕಗಳನ್ನು ರಚಿಸಿದ್ದಾರೆ. ನವ ಕರ್ನಾಟಕ ಪ್ರಕಾಶನ ಮೂಲಕ ಸಾಹಿತ್ಯ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ರಾಜ್ಯ ಸರಕಾರದ ಕರ್ನಾಟಕ ಸುವರ್ಣ ಏಕೀಕರಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನೀರ್ಪಾಜೆ ಭೀಮ ಭಟ್ ಪ್ರಶಸ್ತಿ, ಕರ್ನಾಟಕ ತುಳು ಅಕಾಡೆಮಿ ಪುರಸ್ಕಾರಗಳು ಸಂದಿವೆ.