ರಕ್ಷಿದಿ ಎಂಬ ಮಲೆನಾಡಿನಲ್ಲಿ ಹುಟ್ಟಿದ ಅಮೃತಾ ’ಅಮೃತಯಾನ’ ಎಂಬ ಐದು ಸಂಪುಟಗಳ ಲೇಖಕಿ. ಸಣ್ಣ ವಯಸ್ಸಿನಲ್ಲಿ ಕಾಣಿಸಿದ ಪ್ಯಾರನಾಯ್ಡ್ ಸ್ಕಿಝೋಫ್ರೇನಿಯಾದ ಜೊತೆ ಸೆಣೆಸಿದ ಅಮೃತಾ ಬದುಕಿದ್ದು ಕೇವಲ ಎರಡು ದಶಕ ಮಾತ್ರ. 2017ರಲ್ಲಿ ’ಅಮೃತಾ’ ಎಂಬ ಹುಡುಗಿ ಬರೆದ ಜೀವನ ಚರಿತ್ರೆಯ ಐದು ಸಂಪುಟ ಬಿಡುಗಡೆಯಾಗುವ ಮುನ್ನವೇ ಕಾಲನ ಮನೆಯತ್ತ ಪಯಣ ಬೆಳೆಸಿದಳು. ಎರಡು ವರ್ಷದ ಮಗುವಾಗಿದ್ದಾಗಲೇ ಕಾಣಿಸಿಕೊಂಡ ಕಾಯಿಲೆ ಕೊನೆಯವರೆಗೂ ಅವಳನ್ನು ಕಾಡಿತು. ತನ್ನ ಬದುಕಿನ ಕೊನೆಯ ದಿನಗಳಲ್ಲಿ ಎರಡು ದಶಕದ ಅವಧಿಯನ್ನು ಅಕ್ಷರದಲ್ಲಿ ಹಿಡಿದಿಟ್ಟಳು. ಈ ಕತೆಯಲ್ಲಿ ಅಮೃತಾ ’ತನ್ನ ಕತೆ’ ಹೇಳುವುದಿಲ್ಲ. ಆದ್ದರಿಂದ ಇದು ಆತ್ಮಕತೆಯಲ್ಲ. ಹೊರಗಡೆ ನಿಂತು ’ಅಮೃತಾ’ ಎಂಬ ಎಂಬ ಹುಡುಗಿಯ ಕತೆ ವಿವರಿಸುತ್ತಾಳೆ.