ಅಡ್ಯನಡ್ಕ ಕೃಷ್ಣಭಟ್ ಅವರು ಮಂಗಳೂರು ಬಳಿಯ ಅಡ್ಯನಡ್ಕದಲ್ಲಿ ಜನಿಸಿದರು. ಅವರು ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಾಧ್ಯಾಪಕರಾಗಿ ಪ್ರಸ್ತುತ ನಿವೃತ್ತಿ ಹೊಂದಿ ಮೈಸೂರಿನಲ್ಲಿ ನೆಲೆಸಿದ್ದಾರೆ. ವಿಜ್ಞಾನ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು. ಅವರ ಪ್ರಥಮ ಕೃತಿ ‘ಗಗನಯುಗ' 1964ರಲ್ಲಿ ಪ್ರಕಟವಾಯಿತು. 1966ರಲ್ಲಿ ವಿಜ್ಞಾನ ಪತ್ರಿಕೆ ವಿಜ್ಞಾನ ಲೋಕ'ದ ಸಂಪಾದಕರಾಗಿ ಬರವಣಿಗೆ ಶುರು ಮಾಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಚಟುವಟಿಕೆಯಲ್ಲಿಯೂ ಭಾಗಿಯಾದ್ದಾರೆ, ಸುಮಾರು 20ಕೃತಿಗಳನ್ನು ರಚಿಸಿದ್ದು, 'ಬಾಲ ವಿಜ್ಞಾನ', ‘ಕಿಶೋರ ವಿಜ್ಞಾನ’ನ ಪತ್ರಿಕೆಗಳ ಪ್ರಧಾನ ಸಂಪಾದಕರು ಆಗಿದ್ದರು. 1977ರಲ್ಲಿ 'ಸುದರ್ಶನ' ಡಾ. ಟಿ.ಎಂ.ಎ. ಪೈ ಅವರ ಅಭಿನಂದನ ಗ್ರಂಥ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ದರ್ಶನ ಕರ್ತೃವಾಗಿದ್ದಾರೆ. ಇವರು ನವಕರ್ನಾಟಕ ಜ್ಞಾನ-ವಿಜ್ಞಾನ ಕೋಶ, ನವಕರ್ನಾಟಕ ವಿಜ್ಞಾನ ವಿವರಣ ಪದಕೋಶ, ಇವುಗಳ ಸಲಹಾ ಮಂಡಳಿಗಳ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವಿಜ್ಞಾನ ಶಬ್ದಕೋಶದ ಜಂಟಿಸಂಪಾದಕರಾಗಿದ್ದರು.
`ವಿಜ್ಞಾನ, ಗಗನಯುಗ, ಸಿ.ವಿ.ರಾಮನ್, ಮನುಷ್ಯ ಕಥೆ ಮತ್ತು ಲಕ್ಷ್ಮಿ ರೆಡ್ಡಿ, ಐಸಾಕ್ ನ್ಯೂಟನ್, ಮನುಷ್ಯನ ವಂಶಾವಳಿ ಪೂರ್ಣಸೂರ್ಯ ಗ್ರಹಣ, ಬೆಳ್ಳಿಚಿಕ್ಕೆ, ನಮ್ಮ ವಾತಾವರಣ, ನವವಿಜ್ಞಾನದ ಉದಯ, ಫಿಸಿಕ್ ಮತ್ತು ಐನ್‌ಸ್ಟೈನ್. ಅನುವಾದ: ಹೌಟು ಬಿಲ್ಡ್ ಎ ಟೆಲಿಸ್ಕೋಪ್, ಹ್ಯಾಪಿ ಕಮ್ಯುನಿಕೇಷನ್ಸ್ ಅಂಡರಸ್ಟಾಂಡಿಂಗ್ ಸೈನ್ಸ್, ರಾಮನ್ ಅಂಡ್ ಹಿಸ್ ವರ್ಕ್ ಎಂಡ್ ಎನರ್ಜಿ, ವೆದರ್ ವೆಪನ್, ಪವರ್’ ಹೀಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಅವರ 'ಮನುಷ್ಯನ ಕತೆ' ಕೃತಿಗೆ ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, 'ಸುದರ್ಶನ ಪ್ರಕಾಶನಕ್ಕಾಗಿ 20ನೇ ರಾಷ್ಟ್ರೀಯ ಪ್ರಶಸ್ತಿ, ವಿಜ್ಞಾನ-ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರದ ವಿಜ್ಞಾನ ಜನಪ್ರಿಯತೆಗಾಗಿ ರಾಷ್ಟ್ರೀಯ ಪ್ರಶಸ್ತಿ’ಗಳು ಲಭಿಸಿವೆ.