ಹಿರಿಯ ಲೇಖಕ ಆದ್ಯ ರಾಮಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ. ತಂದೆ-ಸೇತುರಾಮಾ ಚಾರ್ ಆದ್ಯ, ತಾಯಿ-ಕಾಶೀಬಾಯಿ. ಪ್ರಾರಂಭಿಕ ಶಿಕ್ಷಣ ಲಚ್ಯಾಣ ಮತ್ತು ಭುಯ್ಯಾರ ಶಾಲೆಗಳಲ್ಲಿ ಪಡೆದ ಅವರು ಮಾಧ್ಯಮಿಕ ಶಿಕ್ಷಣ ಬಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ ಪಡೆದರು. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾಗಿದ್ದ ಅವರು ಹಲವು ಚಳವಳಿಯಲ್ಲಿ ಭಾಗಿಯಾಗಿ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ನಂತರ ಬಿಜಾಪುರದಲ್ಲಿ ಫ. ಗು. ಹಳಕಟ್ಟಿಯವರ ಮುದ್ರಣಾಲಯದಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ ಅವರು ಆನಂತರ ಮೈಸೂರಿನ ‘ಉಷಾ ಸಾಹಿತ್ಯ ಮಾಲೆ’ಯಲ್ಲಿ ಉದ್ಯೋಗಕ್ಕೆ ಸೇರಿದರು. ಆನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸಕ್ಕೆ ಸೇರಿದರು. ಈ ಸಂದರ್ಭದಲ್ಲಿ ಸಾಹಿತಿಗಳ ಒಡನಾಟದಿಂದಾಗಿ ಹಲವು ಕೃತಿಗಳನ್ನು ರಚಿಸಿದರು. ಸರಕಾರ ರಚಿಸಿದ ‘ಗಡಿನಾಡು ಸಮಿತಿ’ಗಾಗಿ, ‘ಅಖಿಲ ಕರ್ನಾಟಕ ಗಡಿನಾಡು ಸಮಿತಿ’ ಎಂಬ ಖಾಸಗಿ ಸಮಿತಿ ನೇಮಕಗೊಂಡಾಗ ಅದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಹಾರಾಷ್ಟ್ರ, ತಮಿಳುನಾಡು, ಆಂಧ್ರದ ಗಡಿಪ್ರದಶದಲ್ಲೆಲ್ಲಾ ಸಂಚರಿಸಿ, ವಾಸ್ತವಾಂಶಗಳನ್ನು ಸಂಗ್ರಹಿಸಿ ಸರಕಾರದ ಸಮಿತಿಗೆ ಮಹತ್ವದ ಅಂಶಗಳನ್ನು ನೀಡಿದರು. ಹವ್ಯಾಸಕ್ಕಾಗಿ ಬರವಣಿಗೆಯನ್ನು ಪ್ರಾರಂಭಿಸಿದ ರಾಮಾಚಾರ್ಯರಿಗೆ ಅದೇ ಪ್ರಮುಖ ವೃತ್ತಿಯಾಯಿತು. ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಪತ್ರಿಕೆಗಳಿಗಾಗಿ ನೂರಾರು ವಿದ್ವತ್‌ಪೂರ್ಣ ಲೇಖನಗಳನ್ನು ಬರೆದರು. ಹುಟ್ಟಿದ ಕೋಟೆ ಕೊತ್ತಲಗಳ ನಾಡಾದ ಬಿಜಾಪುರದ ಪ್ರೇರಣೆಯಿಂದ ಹಲವು ಐತಿಹಾಸಿಕ ಕೃತಿಗಳನ್ನು ರಚಿಸಿದರು. ಹನುಮಧ್ವಜ ಹಾರಿತು, ಸೂರ್ಯಾಸ್ತ, ವಿಜಾಪುರದ ಪತನ, ಶಂಭೂ, ಶ್ರೀದರ್ಶನ, ಶ್ರೀ ಸಮರ್ಥ, ಧನಂಜಯ, ಕಾಶ್ಮೀರದ ಜ್ವಾಲಾಮುಖಿ, ಮಾತೃಛಾಯ, ವಿಕ್ರಾಂತ ಕೇಸರಿ, ಭಾರತೀಯ ಮುಸಲ್ಮಾನರ ಶೋಧ ಹಾಗೂ ಬೋಧ, ರಂಭಾ, ಪ್ರಸನ್ನ ವೆಂಕಟ, ರಾಜಯೋಗಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರ ‘ರಾಜಯೋಗಿ’ಯು ಶಿವಾಜಿ ಮಹಾರಾಜರನ್ನು ಕುರಿತ ಅಧ್ಯಯನ ಪೂರ್ಣ ಕಾದಂಬರಿ ಎನಿಸಿ ಮಹಾರಾಷ್ಟ್ರದ ಸಂಶೋಧಕ, ಸಾಹಿತಿಗಳ ಗಮನ ಸೆಳೆದ ಕೃತಿಯಾಗಿದೆ. ಮಹಾಭಾರತದ ಕರ್ಣನ ವ್ಯಕ್ತಿ ಚಿತ್ರಣದ ‘ರಾಧೇಯ’ ಮೂರು ಮುದ್ರಣ ಹಾಗೂ ಇಂಗ್ಲಿಷ್‌ಗೆ, ‘ಆಚಾರ್ಯದ್ರೋಣ’ ಎರಡು ಮುದ್ರಣ ಹಾಗೂ ಮಲಯಾಳಂಗೆ ಅನುವಾದಗೊಂಡ ಕೃತಿಗಳಾಗಿವೆ. 10 ಸಾಮಾಜಿಕ ಕಾದಂಬರಿಗಳು, 12ಧಾರ್ಮಿಕ ಗ್ರಂಥಗಳು, ತಿರುಪತಿಕ್ಷೇತ್ರ ಮತ್ತು ಶ್ರೀಕೃಷ್ಣ ದ್ವಾರಕಾ ಎಂಬ ಎರಡು ಕ್ಷೇತ್ರ ಪರಿಚಯ ಕೃತಿಗಳು, 8 ಸಂಪಾದಿತ ಗ್ರಂಥಗಳೂ ಸೇರಿ ಒಟ್ಟು 60 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ ಹಲವಾರು ಸಮಿತಿಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಆದ್ಯರಾಮಾಚಾರ್ಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಂಜಾವೂರಿನ ಇತಿಹಾಸ ರಚನೆಗಾಗಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನದಿಂದ ಬಂಗಾರದ ಪದಕ, ಕರ್ನಾಟಕ ರಾಜ್ಯ ಸಾಮಾಜಿಕ ಹಿತರಕ್ಷಣೆ ಮತ್ತು ಸಾಂಸ್ಕೃತಿಕ ಸಂಘದಿಂದ ಸನ್ಮಾನ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ನಾಡಿನ ಸಾಂಸ್ಕೃತಿ ಕ್ಷೇತ್ರಗಳಲ್ಲಿ ಮಹತ್ವದ ಕಾರ್ಯನಿರ್ವಹಿಸಿದ ಆದ್ಯರಾಮಾಚಾರ್ಯರು 04-12-2010 ರಂದು ನಿಧನರಾದರು.