About the Author

ಆರು ದಶಕಗಳ ಕಾಲ ಸಣ್ಣಕತೆಯ ಪ್ರಕಾರದಲ್ಲಿ ನಿರಂತರವಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡು ಬಂದಿರುವ ಬಲ್ಲಾಳರು ವಸ್ತುವೈವಿಧ್ಯದಲ್ಲಿ, ಅಭಿವ್ಯಕ್ತ ವಿಧಾನದಲ್ಲಿ ಕನ್ನಡ ಕತಾ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ್ದಾರೆ. ಪ್ರಗತಿಶೀಲ ಚಳುವಳಿಯಿರಬಹುದು, ನವೋದಯ ಸಂಪ್ರದಾಯದ ರೀತಿಯಿರಬಹುದು, ನವ್ಯ ಪ್ರಜ್ಞೆಯ ಪ್ರಭಾವವಿರಬಹುದು- ಈ ಎಲ್ಲವನ್ನೂ ತಮ್ಮ ಸೃಜನಶೀಲ ಪಯಣದಲ್ಲಿ ಬಲ್ಲಾಳರು ಮುಖಾಮುಖಿಯಾಗಿದ್ದಾರೆ. ಆದರೆ ಯಾವ ಪಂಥದ ಜೊತೆಗೂ ತಮ್ಮನ್ನು ಅವರು ಸಮೀಕರಿಸಿಕೊಳ್ಳದೆ ಅನನ್ಯವೆಂಬಂತೆ ಬರೆಯುತ್ತಾ ಬಂದಿದ್ದಾರೆ.

ಅವರು 1923 ಡಿಸೆಂಬರ್‌ 01ರಂದು ಉಡುಪಿಯಲ್ಲಿ ಜನಿಸಿದರು. ತಂದೆ ರಾಮದಾಸ, ತಾಯಿ ಕಲ್ಯಾಣಿ. ಮುಂಬಯಿ ಮಹಾನಗರದಲ್ಲಿ ಉದ್ಯೋಗವನ್ನರಿಸದ ಅವರು ವಿದೇಶಿ ತೈಲ ಕಂಪನಿ ಒಂದರಲ್ಲಿ ಶೀಘ್ರಲಿಪಿಕಾರರಾಗಿ ದುಡಿದು ನಂತರ ವಿವಿಧ ಹುದ್ದೆಗಳನ್ನ ಅಲಂಕರಿಸಿ ನಿವೃತ್ತಿ ಪಡೆದರು.  ‘ಬದುಕಿನ ಆದರ್ಶ’ ಅವರ ಪ್ರಥಮ ಕತಾ ಸಂಕಲನ. ಕಾಡುಮಲ್ಲಿಗೆ, ಸಂಪಿಗೆ ಹೂ, ತ್ರಿಕಾಲ, ಮಂಜರಿ ಅವರ ಪ್ರಮುಖ ಕತಾ ಸಂಕಲನ. ಅನುರಕ್ತೆ, ಹೇಮಂತಗಾನ, ವಾತ್ಸಲ್ಯಪಥ, ಉತ್ತರಾಯಣ, ಬಂಡಾಯ, ಆಕಾಶಕೊಂದು ಕಂದೀಲು, ಹೆಜ್ಜೆ, ಹೆಜ್ಜೆಗುರುತು ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ನಾನೊಬ್ಬ ಭಾರತೀಯ ಪ್ರವಾಸಿ ಅವರ ಪ್ರವಾಸ ಕಥನ. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬಿ.ಎಂ.ಶ್ರೀ. ಸ್ಮಾರಕ ಪ್ರಶಸ್ತಿ, ಉಡುಪಿ ಪರ‍್ಯಾಯದ ಗದ್ಯಭಾಸ್ಕರ ಪ್ರಶಸ್ತಿ, ಬಂಡಾಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪ್ರವಾಸ ಕಥನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಮಹಾರಾಷ್ಟ್ರ ಸರಕಾರದ ಗೌರವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ ಪ್ರತಿಷ್ಠಾನ ಪ್ರಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಕಾರ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಮತ್ತು ಮದರಾಸು ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವ ಪ್ರಶಸ್ತಿಗಳು ಅವರನ್ನರಸಿವೆ.

ಪ್ರಮುಖಧಾರೆಗಿಂತ ಭಿನ್ನವಾಗಿ ಬರೆದ ಬಲ್ಲಾಳರ ಬರವಣಿಗೆ ಕಥಾಸಾಹಿತ್ಯದ ವಿಭಿನ್ನ ಸಾಧ್ಯತೆಗಳನ್ನು ನಮಗೆ ಪರಿಚಯ ಮಾಡಿಕೊಡುತ್ತದೆ. ಕನ್ನಡ ಕಥಾ ಪರಂಪರೆಗೆ ವಿಶಿಷ್ಟ ಕೊಡುಗೆಯಾಗುವ ಶಕ್ತಿ ಪಡೆದಿದೆ. ದೈನಿಕಗಳ ಮೂಲಕವೇ ದಟ್ಟ ಅನುಭವ ಕಟ್ಟಿಕೊಡುವ ಇವರು ಕಥನಕ್ರಮ-ಕನ್ನಡ ಪರಂಪರೆಯಲ್ಲಿ ವಿಶಿಷ್ಟವಾದದ್ದು. ಪ್ರಧಾನ ಧಾರೆಯ ಬರವಣಿಗೆಯಿಂದ ನಾವು ಪಡೆಯಬೇಕಾಗಿದ್ದನ್ನು ಗುರ್ತಿಸಿ ಕೊಂಡದ್ದಾಗಿದೆ. ಈಗ ಬಲ್ಲಾಳರಂತಹ ಭಿನ್ನ ಧಾರೆಯ ಲೇಖಕರ ಸಾಹಿತ್ಯದ ಅಧ್ಯಯನ ಅನೇಕ ಹೊಸ ಸಾಧ್ಯತೆಗಳನ್ನು ನಮಗೆ ಕಾಣಿಸಬಹುದು. ಅವರು 2008 ಜನೆವರಿ 30ರಂದು ನಿಧನರಾದರು.

ವ್ಯಾಸರಾಯ ಬಲ್ಲಾಳ

(01 Dec 1923-30 Jan 2008)

Awards