About the Author

ವೃತ್ತಿಯಿಂದ ವೈದ್ಯರು ಮತ್ತು ಪ್ರವೃತ್ತಿಯಿಂದ ವೈದ್ಯ ಸಾಹಿತಿಗಳೂ ಆದ ಅನಂತ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. ಮಹಾತ್ಮ ಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದ ತಂದೆ ಅನಂತರಾವ ಪ್ರಸಿದ್ಧ ವಕೀಲರು ತಾಯಿ ಲಕ್ಷ್ಮೀಬಾಯಿಯವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದವರು.

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಅಥಣಿಯಲ್ಲಿ ಪಡೆದ ಅವರು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್. ಹಾಗೂ ಮಿರಜದ ಜಿ.ಎಂಸಿಯಲ್ಲಿ ಎಂ.ಡಿ. ಮುಗಿಸಿದರು. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜ, ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜುಗಳಲ್ಲಿ ನಿರಂತರ ವೈದ್ಯ ಶಿಕ್ಷಣದಲ್ಲಿ ನಿರಂತರ ೪೫ ವರುಷಗಳ ಸೇವೆ-ಪ್ರಾಧ್ಯಾಪಕ ಹಾಗೂ ವಿಭಾಗೀಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದರು. ಅಂಗರಚನಾ ವಿಜ್ಞಾನ ಅಧ್ಯಾಪಕರಾಗಿದ್ದ ಅವರು ಉತ್ತಮ ಯೋಗತಜ್ಞರೂ ಆಗಿದ್ದರು.

ಹುಬ್ಬಳ್ಳಿಯಲ್ಲಿ ಎಂ.ಬಿ.ಬಿಎಸ್ ಓದುವ ಸಮಯದಲ್ಲಿ ವರಕವಿ ಡಾ.ದ.ರಾ. ಬೇಂದ್ರೆಯವರ ಒಡನಾಟದಿಂದ ಸಾಹಿತ್ಯ ಕೃಷಿಗೆ ಪ್ರೇರಣೆ ಹಾಗೂ ಪ್ರೋತ್ಸಾಹ ದೊರೆಯಿತು. ಕನ್ನಡದಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯೇತರ ಲೇಖನಗಳನ್ನು ಬರೆಯಲು ಆರಂಭಿಸಿದರು. ಸುಮಾರು ಎರಡು ಸಾವಿರಗಳಿಗೂ ಮಿಕ್ಕಿ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ವೈವಿಧ್ಯಮಯ ವಿಷಯಗಳ ಅವರ ನಾಲ್ವತ್ತು ಕೃತಿಗಳು ಪ್ರಕಟಗೊಂಡಿವೆ.

ಜನಪ್ರಿಯ ವೈದ್ಯ ಶಿಕ್ಷಕರಾದ ಇವರ ವೈದ್ಯ ಶಿಕ್ಷಣ, ಯೋಗ ಸಂಶೋಧನೆ, ಶರೀರ ಶಾಸ್ತ್ರ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿವೆ. 'ದೇಹದಲ್ಲಿ ಏಳು ದಿನಗಳ ಪಯಣ' ಕೃತಿಗೆ ಕುವೆಂಪು ವೈದ್ಯ ಸಾಹಿತ್ಯ ಪ್ರಶಸ್ತಿ, 'ದೇಹಲೋಕದ ವಿಸ್ಮಯಗಳು' ಕೃತಿಗೆ ಡಾ ಪಿ.ಎಸ್ ಶಂಕರ ಪ್ರತಿಷ್ಠಾನ ಪ್ರಶಸ್ತಿ, 'ದೇಹ ದೇಗುಲಕ್ಕೊಂದು ಪ್ರಣಾಮ'ಕ್ಕೆ ಡಾ.ಸಜ.ನಾ ಪ್ರಶಸ್ತಿ ಅಲ್ಲದೆ ಜೀವಮಾನ ಸಾಧನೆಗಾಗಿ ಕರ್ನಾಟಕ ಸರಕಾರದ ಡಾ ಅನುಪಮಾ ನಿರಂಜನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.

 

ವಸಂತ ಕುಲಕರ್ಣಿ