ಸಿದ್ಧಾರ್ಥ ವಾಡೆನ್ನವರ ಇವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಎಂಬ ಗ್ರಾಮದಲ್ಲಿ ಜನಿಸಿದರು. ಕೂಲಿ ಮಾಡುವ ಕುಟುಂಬದಲ್ಲಿ ಜನಿಸಿದ ಇವರು ಅದೇ ಊರಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆದರು. ಮುಂದೆ ವಾಣಿಜ್ಯ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸಿದ್ಧಾರ್ಥ ಇವರು ಕಳೆದ 2 ದಶಕಗಳಿಂದ ಸತೀಶ ಶುಗರ್ಸ ಸಮೂಹಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ 2013ರಲ್ಲಿ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದರು. 2015ರಿಂದ ಸತೀಶ ಶುಗರ್ಸ ಲಿಮಿಟೆಡ್ ಹಾಗೂ ಬೆಳಗಾವಿ ಶುಗರ್ಸ ಪ್ರೈ. ಲಿಮಿಟೆಡ್ ಸಂಸ್ಥೆಗಳಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2015-16ನೇ ಸಾಲಿನಲ್ಲಿ ಒಂದು ಬೃಹತ್ ಸಕ್ಕರೆ ಕಾರ್ಖಾನೆಯನ್ನು ಕೇವಲ 11 ತಿಂಗಳಲ್ಲಿ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರಿಗೆ ಭಾರತೀಯ ಶುಗರ್ಸ್, ಪುಣೆ ಈ ಸಂಸ್ಥೆಯು ಸಕ್ಕರೆ ಉದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ “Best M.D Karnataka State 2016-17” 2016-17” ಪ್ರಶಸ್ತಿಯನ್ನು ನೀಡಿ ಸತ್ಕರಿಸಿತು. ಇವರು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ ಶುಗರ್ಸ್ ಸಂಸ್ಥೆಗೆ 2017-18ನೇ ಸಾಲಿನಲ್ಲಿ ಸಿಸ್ಟಾ (SISSTA) ಇವರು ಕೊಡಮಾಡುವ “Best Performance Co-Generation, Golden Award” ಲಭಿಸಿದೆ. ಬೆಳಗಾವಿ ಶುಗರ್ಸ್ ಪ್ರೈ.ಲಿಮಿಟೆಡ್ ಸಂಸ್ಥೆಗೆ 2018-19ನೇ ಸಾಲಿನಲ್ಲಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಕರ್ನಾಟಕ ಸರ್ಕಾರ ಕೊಡಮಾಡುವ “Overall Best Technical Efficiency Award” ಲಭಿಸಿದೆ. ಈ ಸಮೂಹ ಸಂಸ್ಥೆ ದೇಶದ ಪ್ರತಿಷ್ಠಿತ 10 ಸಕ್ಕರೆ ಸಂಸ್ಥೆಗಳಲ್ಲಿ ಒಂದಾಗಿದೆ. ಸತತ ಅಧ್ಯಯನದಲ್ಲಿ ತೊಡಗುವ ಸಿದ್ಧಾರ್ಥ ಇವರು ಧರ್ಮ-ದೇವರು, ಧ್ಯಾನ-ಆಧ್ಯಾತ್ಮ, ವ್ಯವಹಾರ-ಉದ್ಯಮ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಪ್ರಸಿದ್ಧ ಗ್ರಂಥಗಳನ್ನು ಅಧ್ಯಯನ ಮಾಡಿ “ಪೀಪಲ್ಸ್ ಚಾಣಕ್ಯ” ಎಂಬ ಗ್ರಂಥ ಬರೆದಿದ್ದಾರೆ. ಈ ಗ್ರಂಥ ರಾಜಕೀಯ, ಸಾರ್ವಜನಿಕ ಕ್ಷೇತ್ರಗಳಲ್ಲಿ ನಾಯಕತ್ವ ರೂಪಿಸಿಕೊಳ್ಳಲು ದಿಕ್ಸೂಚಿ ಇದ್ದಂತಿದೆ. 2018ರಲ್ಲಿ ನಡೆದ ಕರ್ನಾಟಕ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಜ್ಯದ 224 ಕ್ಷೇತ್ರಗಳ ಸಮಗ್ರ ರಾಜಕೀಯ ವಿಶ್ಲೇಷಣೆಯುಳ್ಳ “ಕರ್ನಾಟಕ ಪಾಲಿಟಿಕ್ಸ್-2018” ಪುಸ್ತಕವನ್ನು ಬರೆದು ಈ ನಾಡಿಗೆ ಅರ್ಪಿಸಿದ್ದಾರೆ. ಅದರ ಪರಿಷ್ಕ್ರತ ಆವೃತ್ತಿಯೂ ಲಭ್ಯವಿದೆ. ಸತ್ಯವನ್ನು ಹುಡುಕುವ ಪ್ರಯತ್ನ ಮಾಡಿ ನೂರಾರು ಲೇಖನಗಳನ್ನು ಬರೆದಿದ್ದಾರೆ. ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ “ಸತ್ಯ ಎಲ್ಲಿದೆ...?” ಎಂಬ ಗ್ರಂಥ ಬರೆದು ನಾಡಿಗೆ ಅರ್ಪಿಸಿದ್ದಾರೆ. 1990ರಲ್ಲಿ ವಿದ್ಯಾಭ್ಯಾಸದ ಜೊತೆಗೆ ಕೂಲಿ ಕೆಲಸ ಮಾಡುತ್ತಿದ್ದ ಇವರು ಇಂದು ಸುಮಾರು 700 ಕೋಟಿ ರೂ.ಗಳ ವ್ಯವಹಾರ ಇರುವ ಸತೀಶ ಶುಗರ್ಸ ಸಮೂಹ ಸಂಸ್ಥೆಯ ಎಂ.ಡಿ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘಣೀಯ. ಇವರು ಯುವಶಕ್ತಿಗೆ ಸ್ಫೂರ್ತಿಯಾಗಿದ್ದಾರೆ. ಸಾವಿರಾರು ರೈತ ಕುಟುಂಬಗಳು, ಕೂಲಿಗಾರರು ಮತ್ತು ಸಿಬ್ಬಂದಿವರ್ಗ ಇವರೊಂದಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಂಬಂಧ ಹೊಂದಿದ್ದಾರೆ. ನಾಡಿನ ಜನರ ಭಾವನೆ, ಕಷ್ಟಗಳನ್ನು ಅರ್ಥಮಾಡಿಕೊಂಡಿರುವ ಇವರು ಸತ್ಯ ಹುಡುಕುವ ಪ್ರಯತ್ನದಲ್ಲಿ ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ರಾಜಕೀಯ ವಿಷಯಗಳನ್ನೊಳಗೊಂಡ ಅಂಕಣಗಳನ್ನು ಬರೆಯುತ್ತಿದ್ದಾರೆ.