ಪ್ರಸ್ತುತ ಯಡಿಯೂರು ಗದಗ ಡಂಬಳ್ ಮಠದ ಪೀಠಾಧಿಪತಿಯಾಗಿರುವ ಜಗದ್ಗುರು ಶ್ರೀ ಸಿದ್ಧರಾಮ ಸ್ವಾಮೀಜಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಡಿಸೆಂಬರ್ 12, 1958ರಲ್ಲಿ ಜಂಗಮ ಸಮಾಜದ ತಂದೆ ರುದ್ರಯ್ಯ, ತಾಯಿ ಶಾಂತಮ್ಮಳ ಉದರದಲ್ಲಿ ಜನಿಸಿದ ಬಾಲಕ ಗುರುಪಾದಯ್ಯ. ಮುಂದೆ ಬಿಳಗಿಯ ಕಲ್ಮಠದ ಶಾಖಾ ಮಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡರು.
ಅದಾದ ಬಳಿಕ ಬನಾರಸ್ ವಿವಿಯಲ್ಲಿ ಎಂಎ ಹಿಂದಿ, ಸಂಸ್ಕೃತ ಹಾಗೂ ತತ್ವಶಾಸ್ತ್ರ ಉನ್ನತ ವ್ಯಾಸಂಗ ಪಡೆದುಕೊಂಡರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ 1994ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡರು. ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳ ಉತ್ತರಾಧಿಕಾರಿಯಾಗಿ ಇಡೀ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಹಿಂದಿನ ಮಠಾಧೀಶರ ಎಲ್ಲಾ ಕೆಲಸವನ್ನು ಮುಂದುವೆಸಿಕೊಂಡು ಮುನ್ನಡೆದಿದ್ದರು.
ಇವರು ನಾಗನೂರು ರುದ್ರಾಕ್ಷಿ ಮಠದ 9ನೇ ಪೀಠಾಧಿಪತಿಯಾಗಿ ನೇಮಕಗೊಂಡ ನಂತರ 7 ದಶಕಗಳ ದಾಸೋಹ ಚಟುವಟಿಕೆಯನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮಠವನ್ನು ಬೆಳೆಸುವುದರ ಜತೆಗೆ ಪ್ರಾಥಮಿಕ ಶಿಕ್ಷಣದಿಂದ ಇಂಜಿನಿಯರಿಂಗ್ ಕಾಲೇಜುವರೆಗೆ ವ್ಯಾಸಂಗ ಸೌಲಭ್ಯ ಕಲ್ಪಿಸಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ಹಲವು ಕೃತಿಗಳನ್ನು ರಚಿಸಿದ್ದ ಅವರು,1990ರಲ್ಲಿ ಲಿಂಗಾಯತ್ ಅಧ್ಯಯನ ಅಕಾಡೆಮಿ ಸ್ಥಾಪಿಸಿ 85 ಕ್ಕೂ ಅಧಿಕ ಗ್ರಂಥ ಪ್ರಕಟಿಸಿದ್ದಾರೆ. 1995ರಲ್ಲಿ ಮಠದಲ್ಲಿಯೇ ಸಂಶೋಧನಾ ಕೇಂದ್ರ ಗ್ರಂಥಾಲಯ ಸ್ಥಾಪಿಸಿ ಧರ್ಮ, ಸಾಹಿತ್ಯ, ಸಂಸ್ಕೃತಿ ಸಂಬಂಧಿಸಿದ 16ಕ್ಕೂ ಅಧಿಕ ಗ್ರಂಥಗಳನ್ನು ಹೊರ ತಂದಿದ್ದಾರೆ. 1 ಸಾವಿರ ಕ್ಕೂ ಹೆಚ್ಚು ಹಸ್ತ ಪ್ರತಿಗಳನ್ನು ಸಂಗ್ರಹಿಸಿದ್ದಾರೆ. ಇದರ ಜತೆಗೆ ಇಡೀ ತಮ್ಮ ಜೀವನವನ್ನೇ ಸಮಾಜಕ್ಕೆ ಮುಡುಪಿಟ್ಟು ಮೂಢನಂಬಿಕೆ, ಕಂದಾಚಾರ ವಿರುದ್ಧ ಹೋರಾಟ ನಡೆಸುತ್ತಾ ಪ್ರಗತಿಪರ ವಿಚಾರಗಳನ್ನೇ ಮಂಡಿಸುತ್ತಾ ಬಂದಿದ್ದಾರೆ. ಪ್ರಸ್ತುತ ಯಡಿಯೂರು ಗದಗ ಡಂಬಳ್ ಮಠದ ಪೀಠಾಧಿಪತಿಯಾಗಿದ್ದಾರೆ.
ಕೃತಿಗಳು: ಇಷ್ಟಲಿಂಗ ಪೂಜಾ ವಿಧಾನ, ಧರ್ಮ ಜ್ಯೋತಿ, ಚಿಂತನ, ವಚನಾರ್ಥ ಚಿಂತನ, ಇಸ್ಲಾಂ ಧರ್ಮ ಸಂದೇಶ ಸೇರಿ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ..