ಪಿ.ಎಸ್. ರಾಮಾನುಜಂ ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ IPS ಅಧಿಕಾರಿಗಳಾಗಿದ್ದು ಎಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲಿಸ್ (ADGP) ಆಗಿ ಕಾರ್ಯನಿರ್ವಹಿಸಿ 2001ರಲ್ಲಿ ನಿವೃತ್ತರಾದರು. ಸಾಹಿತ್ಯ, ಆಡಳಿತ ಎರಡನ್ನೂ ಸಮರ್ಥವಾಗಿ ನಿರ್ವಹಿಸಿದ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಬೇಡಮೂಡಲು ಗ್ರಾಮ. ತಂದೆ ಪ್ರತಿವಾದಿ ಭಯಂಕರ ಎಂದೇ ಬಿರುದಾಂಕಿತರಾಗಿದ್ದ ಸಂಪತ್ ಕುಮಾರ ಆಚಾರ್ಯ, ತಾಯಿ ಇಂದಿರಮ್ಮ. ಆರಂಭಿಕ ಶಿಕ್ಷಣ ಹರದನಹಳ್ಳಿ, ಚಾಮರಾಜನಗರದಲ್ಲಿ ಪೂರ್ಣಗೊಳಿಸಿದ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ(ಆನರ್ಸ್) ಪದವಿ ಪಡೆದರು,ಆನಂತರ ಕನ್ನಡ ಪಂಡಿತ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್, ಎಂ.ಎ ಪ್ರಥಮ ರ್ಯಾಂಕ್ ಸೇರಿದಂತೆ ಐದು ಚಿನ್ನದ ಪದಕದೊಡನೆ ಉತ್ತೀರ್ಣರಾದರು. ಸಂಸ್ಕೃತದಲ್ಲಿ ಸಂಶೋಧನೆ ಮಾಡಿ ಪಿಎಚ್.ಡಿ ಪದವಿ ಮತ್ತು ಡಿ.ಲಿಟ್ ಪದವಿಗಳಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದತ್ತ ಆಸಕ್ತಿ ಹೊಂದಿದ್ದ ರಾಮಾನುಜಂ ಅವರು ಕಥೆ, ಕವನ, ಲೇಖನ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದರು.
ಅವರ ದೊಡ್ಡಪ್ಪ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದುದರಿಂದ ಐ.ಪಿ.ಎಸ್ ಓದುವದನ್ನು ತಮ್ಮ ಗುರಿಯಾಗಿಸಿಕೊಂಡರು. ಜೊತೆಗೆ ಐಪಿಎಸ್ 6 ರ್ಯಾಂಕ್ ಪಡೆದು ಕರ್ನಾಟಕದಲ್ಲಿ ಸರಕಾರಿ ಸೇವೆಗೆ ನಿಯೋಜನೆಗೊಂಡರು. ಕೋಲಾರ, ಧಾರವಾಡ, ಪುತ್ತೂರ, ಕೊಡಗಿನಲ್ಲಿ ಎ.ಎಸ್.ಪಿ.ಎಸ್.ಪಿ ಅಡಿಷನಲ್ ಡಿ.ಜಿ.ಪಿಯಾಗಿಯೂ ಸೇವೆ ಸಲ್ಲಿಸಿ 2001ರಲ್ಲಿ ನಿವೃತ್ತರಾದರು. ಸಾಹಿತ್ಯದತ್ತ ಒಲವಿದ್ದ ರಾಮಾನುಜಂ ಅವರು ಸಂಗೀತಕ್ಕೂ ಮನಸೋತಿದ್ದರು ಶಾಸ್ತ್ರೀಯ ಸಂಗೀತ ಹಾಗೂ ಪಿಟೀಲು ವಾದನದಲ್ಲೂ ಪ್ರವೀಣರಾಗಿ ಗುರುತಿಸಿಕೊಂಡಿದ್ದರು. ಕೊಡಗಿನಲ್ಲಿ ಸೇವೆ ಸಲ್ಲಿಸುವ ವೇಳೆ ‘ಕೊಡವರು’ ಎಂಬ ಸಂಶೋಧನಾ ಕೃತಿಯನ್ನು ರಚಿಸಿದ್ದರು. ಲಲಿತ ಪ್ರಬಂಧಗಳು ರಾಮಾನುಜಂ ಅವರಿಗೆ ಹೆಚ್ಚು ಕೀರ್ತಿ ತಂದ ಪ್ರಕಾರ. ಬೆಕ್ಕಿನ ಭಾಷೆ ಮತ್ತು ಇತರ ಪ್ರಬಂಧಗಳು, ಪ್ರೀತಿ ಪ್ರದರ್ಶನ ಮತ್ತು ಇತರ ಪ್ರಬಂಧಗಳು, ಪ್ರಬಂಧ ವಿಹಾರ, ಇಂಗಿತ, ನಕ್ಷತ್ರಿಕರ ಲೋಕದಲ್ಲಿ, ಮಿಣುಕು, ಅಯನ, ಬೆಳಕು ಹರಿದಂತೆ, ವಾಗರ್ಥ ಸೇರಿದಂತೆ ಹಲವಾರು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.