ಚಿತ್ರದುರ್ಗ ಜಿಲ್ಲೆಯ ಆಂಧ್ರಗಡಿಯಂಚಿನ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯವರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ (1952) ಜಾನಪದ ವಿದ್ವಾಂಸರು. ಮೀರಾಸಾಬಿಯಳ್ಳಿಯ ಪಟೇಲರಾದ ಪಟೇಲ್ ಬೊಮ್ಮೇಗೌಡ ಅವರ ತಂದೆ. ಕರಿಯಮ್ಮ ತಾಯಿ. ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಬಿ.ಎ. (ಆನರ್) (1972). ಎಂ.ಎ. (1974) ಪದವಿ ಪಡೆದವರು. ಮೈಸೂರು ವಿಶ್ವವಿದ್ಯಾನಿಲಯದಿಂದ “ಕಾಡುಗೊಲ್ಲರ ಇಬ್ಬರು ಸಾಂಸ್ಕತಿಕ ವೀರರು (ಎತ್ತಪ್ಪ-ಮುಂಜಪ)- ಒಂದು ಅಧ್ಯಯನಕ್ಕಾಗಿ ಪಿಎಚ್.ಡಿ (1996) ಪದವಿ ದೊರೆಯಿತು.
ಎರಡು ಬಾರಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ (1984-1987 ಮತ್ತು 1998-2001) ಸೇವೆ ಸಲ್ಲಿಸಿರುವ ಅವರಿಗೆ ಜಾನಪದ ಕ್ಷೇತ್ರಕಾರ್ಯಕ್ಕಾಗಿ ಜಿ.ಶಂ.ಪ ಜಾನಪದ ತಜ್ಞ ಪ್ರಶಸ್ತಿ' (2011) ನೀಡಿ ಗೌರವಿಸಲಾಗಿದೆ. ಚಳ್ಳಕೆರೆ ತಾಲ್ಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ (2003) ಸಂದಿದೆ.
ತೆಲುಗು-ಕನ್ನಡ ಭಾಷೆಗಳ ಅನುಬಂಧವನ್ನು ಸೃಜನಶೀಲ ಅನುವಾದದ ಮೂಲಕ ಬೆಸೆದ ಕೊಡುಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 'ಆಂಧ್ರ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ' (2013) ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುಗಳಾದ ಕಾಡುಗೊಲ್ಲರು ಮತ್ತು ಮ್ಯಾಸಬೇಡರ ಬಗ್ಗೆ ಕಳೆದ 35 ವರ್ಷಗಳಿಂದ ವ್ಯಾಪಕವಾದ ಕ್ಷೇತ್ರಕಾರ್ಯ ಮತ್ತು ಅಧ್ಯಯನಕ್ಕೆ ತೊಡಗಿಕೊಂಡು 25ಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿದ್ದಾರೆ. ಅನುವಾದದ ಹವ್ಯಾಸ ಇರುವ ಇವರು ತೆಲುಗಿನಿಂದ 50ಕ್ಕೂ ಹೆಚ್ಚು ಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಕಾಡುಗೊಲ್ಲರನ್ನು ಕುರಿತ ಇವರ ನಾಲ್ಕು ಕೃತಿಗಳು ಇಂಗ್ಲಿಷ್ಗೂ ಅನುವಾದಗೊಂಡಿವೆ.
ಚಳ್ಳಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (1975) ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಪ್ರಾಂಶುಪಾಲರಾಗಿ ಸತತವಾಗಿ 37 ವರ್ಷಗಳ ಕಾಲ ಚಿತ್ರದುರ್ಗ, ದೊಡ್ಡಬಳ್ಳಾಪುರ, ಬೆಂಗಳೂರುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ (2012) ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಅವರ ಕೆಲವು ಮುಖ್ಯ ಕೃತಿಗಳು - ಮಕ್ಕಳ ಸಾಹಿತ್ಯ- ಕಂಡು ಕೇಳಿದ ಕತೆಗಳು, ನಮ್ಮ ಸುತ್ತಿನ ಕತೆಗಳು; ಜಾನಪದ ಸಂಶೋಧನೆ- ದುರುಗ ಜಾನಪದ, ಗೊಲ್ಲ ಕಡಗ, ಕಾಡುಗೊಲ್ಲಿ ಬುಡಕಟ್ಟು ವೀರರು (ಡಾಕ್ಟೋರೇಟ್ ಮಹಾಪ್ರಬಂಧ), ರೇಡಿಯೋ ಜಾನಪದ, ಮಾಸಮಂಡಲ, ಕಣಜ, ಒಡನಾಟ, ಜಾನಪದ ಅನುಸಂಧಾನ, ಮನಸಂಪನ್ನರು, ಸಿರಿಯಜ್ಜಿ ಸಂಸ್ಕೃತಿ ಕಥನ : ಇಂಗ್ಲಿಷ್ಗೆ ಅನುವಾದ- ಎತ್ತಪ್ಪ, ಜುಂಜಪ್ಪ, ಪಶುಪಾಲಕ ವೀರರ ಕಥೆಗಳು, ಕಾಡುಗೊಲ್ಲರ ಸಂಸ್ಕೃತಿ; ವಿಮರ್ಶೆ ಗಳಿಯ ದನಿ, ಕಡೆಗೋಲು: ಸಂಪಾದನೆ- ಮರಡಿಹಳ್ಳಿ ಸೀತಾರಾಮರೆಡ್ಡಿಯವರ ಸಮಗ್ರ ನಾಟಕಗಳು, ಕುಂಚಿಟಿಗರು, ಮನದಾಳದ ಕನಸುಗಳು, ಕೃಷ್ಟಸಿರಿ; ತೆಲುಗಿನಿಂದ ಕನ್ನಡಕ್ಕೆ- ಕೇತು ವಿಶ್ವನಾಥರೆಡ್ಡಿಯವರ ಕಥೆಗಳು, ರಾಯಲಸೀಮ ಕಥೆಗಳು; ಜೀವನ ಚರಿತ್ರೆ- ಮರೆಯಲಾಗದ ನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿ.