ಲೇಖಕ, ಅನುವಾದಕ ಮಾಧವ ಚಿಪ್ಪಳಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಚಿಪ್ಪಳಿಯವರು. ಸಾಗರದ ಲಾಲ್ಬಹಾದೂರ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ., ಜೊತೆಗೆ ಮಣಿಪಾಲ ವಿಶ್ವವಿದ್ಯಾಲಯದಿಂದ ಭಾಷಾತತ್ತ್ವಶಾಸ್ತ್ರ ಮತ್ತು ಭಾಷಾಂತರ ಅಧ್ಯಯನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅವರು ಬರೆದ ಭಾಷೆ-ತತ್ತ್ವ-ಕವಿತೆಗಳ ಕುರಿತ ಪ್ರಬಂಧಗಳ ಸಂಕಲನ ‘ನುಡಿಯೊಡಲು,’ ಅನುವಾದಿಸಿರುವ ‘ಆರು ಟಾಲ್ಸ್ಟಾಯ್ ಕತೆಗಳು’ ಮತ್ತು ಜಿಯಾವುದ್ದೀನ್ ಸರ್ದಾರರ ‘ಸ್ವರ್ಗ ಸಾಧನೆಯ ಉತ್ಕಟ ಬಯಕೆ: ಸಂದೇಹಿ ಮುಸ್ಲಿಮನ ಯಾತ್ರೆಗಳು’ ಈಗಾಗಲೇ ಪ್ರಕಟಗೊಂಡಿವೆ. ಅವರ ‘ಆರು ಟಾಲ್ಸ್ಟಾಯ್ ಕತೆಗಳು’ ಪುಸ್ತಕಕ್ಕೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ 2009ನೇ ಸಾಲಿನ ಅನುವಾದ ಪುರಸ್ಕಾರ ಸಿಕ್ಕಿದೆ. ಸಾಗರದ ಸಮೀಪ ಚಿಪ್ಪಳಿಯಲ್ಲಿ ನೆಲೆಸಿ ಅಡಿಕೆ ವ್ಯವಸಾಯ ಮತ್ತು ವ್ಯವಹಾರದಲ್ಲಿ ತೊಡಗಿರುವ ಮಾಧವ ತಮ್ಮ ಬಿಡುವಿನ ವೇಳೆಯಲ್ಲಿ ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ಅಧ್ಯಾಪನವನ್ನೂ ಮಾಡುತ್ತಾರೆ. ಅವರ ಮತ್ತೊಂದು ಅನುವಾದಿತ ನಾಟಕ ಫೀದ್ರಾ ಪ್ರಕಟಗೊಂಡಿದೆ.