About the Author

'ಕು. ಗೋ' ಎಂದೇ ಜನಪ್ರಿಯರಾಗಿರುವ ಲೇಖಕ ಹೆರ್ಗ ಗೋಪಾಲ ಭಟ್ಟರು ತಮ್ಮ ಪುಸ್ತಕ ಪ್ರೀತಿಗಾಗಿ ಹೆಸರಾದವರು. ಅವರನ್ನು ಕುರಿತು ’ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು.ಗೋ’ ಎಂಬ ಗ್ರಂಥ ಪ್ರಕಟವಾಗಿದೆ. ಗೋಪಾಲ ಭಟ್ಟರು ಜನಿಸಿದ್ದು 1938 ರ ಜೂನ್ 6ರಂದು. ತಂದೆ ಅನಂತ ಪದ್ಮನಾಭ ಭಟ್ಟ ಮತ್ತು ತಾಯಿ ವಾಗ್ದೇವಿಯಮ್ಮ.
ಎಸ್. ಎಸ್. ಎಲ್. ಸಿಯಲ್ಲಿ ರಾಜ್ಯಮಟ್ಟದಲ್ಲಿ 37ನೇ Rank ಪಡೆದ ಅವರು ಮೈಸೂರಿನ ಯುವರಾಜ ಕಾಲೇಜು ಮತ್ತು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಮತ್ತು ಬಿ. ಎಸ್ಸಿ ಓದು ಕೈಗೊಂಡರು. ಕಾರಣಾಂತರಗಳಿಂದ ಅವರಿಗೆ ಬಿ. ಎಸ್ಸಿ ಪೂರ್ಣಗೊಳಿಸಲಾಗಲಿಲ್ಲ.

ಉದ್ಯೋಗಕ್ಕೆ ಸೇರಿದ ನಂತರ ಅಂಚೆ ತೆರಪಿನ ಮೂಲಕ ಬಿ. ಎ. ಪದವಿ ಪಡೆದ ಅವರು 1960 ರಲ್ಲಿ LIC ಯಲ್ಲಿ ಉದ್ಯೋಗಕ್ಕೆ ಸೇರಿದರು. ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿದ್ದ ಪ್ರೊ ಎಂ. ಮಂಜುನಾಥ ಭಟ್ಟರ ಪುತ್ರಿ ಶುಭಾವತಿ ಅವರೊಂದಿಗೆ 1963 ರಲ್ಲಿ ಗೋಪಾಲಭಟ್ಟರ ಮದುವೆ ನಡೆಯಿತು. ಅವರಿಗೆ ಆತ್ಮಭೂತಿ, ವಿಷ್ಣು ಮತ್ತು ಆಶಾ ಎನ್ನುವ ಮೂವರು ಮಕ್ಕಳು. 1994 ರಲ್ಲಿ ಗೋಪಾಲ ಭಟ್ಟರ ಪತ್ನಿ ಶುಭಾವತಿ ಆಕಸ್ಮಿಕವಾಗಿ ತೀರಿದರು. ಸ್ವಯಂ ನಿವೃತ್ತಿ (1996) ಪಡೆದು ಪುಸ್ತಕ ಪ್ರೀತಿಯ ಕನ್ನಡ ಸೇವೆಯಲ್ಲಿ ತೊಡಗಿದ್ದಾರೆ. ಸದ್ಯ ಉಡುಪಿ ಸಮೀಪದ ಹಯಗ್ರೀವ ನಗರದಲ್ಲಿ ನಿರಂತರ ಪುಸ್ತಕ ಹಂಚುವಿಕೆಯಲ್ಲಿ ತೊಡಗಿಕೊಂಡು ನಿವೃತ್ತ ಜೀವನ ನಡೆಸುತ್ತಿದ್ದಾರೆ.

ಕು. ಗೋ ಅವರ ಕಥಾ ಸಂಕಲನಗಳು ಮೂರು - ಶನಿ ಹಿಡಿದವ (1978), ಹತ್ತು ಕಥೆಗಳು (1997), ಎತ್ತಣಿಂದೆತ್ತ (2002), ಒಂದು ಪ್ರಬಂಧ ಸಂಕಲನ - ಅಕ್ಕನ ಮದುವೆ (1964), ಮೂರು ವಿನೋದ ವ್ಯಂಗ್ಯ ಬರಹಗಳ ಸಂಗ್ರಹ - ತೇಲ್ನೋಟ (1999), ಲೊಳಲೊಳಾಯಿ (2001), ಪಟಪಟ ಪಟಾಕಿ (2004) ಪ್ರಕಟವಾಗಿವೆ. ಅವರಿಗೆ 2002 ರಲ್ಲಿ ಗೊರೂರು ಸಾಹಿತ್ಯ ಪ್ರಶಸ್ತಿ, 2005 ರಲ್ಲಿ ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿಗಳು ಲಭಿಸಿವೆ. 

ಕು.ಗೋ. (ಹೆರ್ಗ ಗೋಪಾಲ ಭಟ್ಟ)

(06 Jun 1938)

BY THE AUTHOR