ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..
ಕೃಷ್ಣಶರ್ಮರು 12ನೇ ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು ಹಾಗೂ ಮರು ವರ್ಷವೇ ಪತ್ನಿ ತೀರಿ ಹೋದರು.
5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ಕಿ.ಮೀ. ದೂರದ ಮುಮದಾಪುರಕ್ಕೆ ದಿನಾಲು ತೆರಳಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು. ಮುಂದೆ ಬೆಳಗಾವಿಯಲ್ಲಿ ಮುಲ್ಕಿ ಪರೀಕ್ಷೆ ತೇರ್ಗಡೆಯಾದರು. 1918ರಲ್ಲಿ ಬೆಳಗಾವಿಯ ಮುನಸಿಪಾಲಿಟಿಯಲ್ಲಿ ಕೆಲಸ ಸಿಕ್ಕಿತು. ಅದು-ಮನೆಮನೆಗಳಿಗೆ ಹೋಗಿ ಇಲಿ ಹಿಡಿಯುವುದು. ನಂತರ, ಈ ಕೆಲಸ ತೊರೆದು ಕಿತ್ತೂರಿನಲ್ಲಿ ಸಂಸ್ಕೃತ ಅಧ್ಯಯನ ಮಾಡಿ ಶಿಕ್ಷಕರಾದರು. ಮತ್ತೆ ಕೆಲಸ ತೊರೆದು ಧಾರವಾಡ ನಂತರ ಬೆಂಗಳೂರಿನಲ್ಲಿ ಕೆಲಸ ಮಾಡಿ, ಮತ್ತೆ ಧಾರವಾಡಕ್ಕೆ ಮರಳಿ ಜಯಂತಿ ಪತ್ರಿಕೆಯ ಸಂಪಾದಕರಾದರು.
ಭಾವಗೀತ, ನಲ್ವಾಡುಗಳು ಸೇರಿದಂತೆ ಒಟ್ಟು 14 ಕವನ ಸಂಕಲನಗಳು, ಸಂಸಾರದ ಚಿತ್ರ ಹಾಗೂ ಬಡತನದ ಬಾಳು ಸೇರಿದಂತೆ ಒಟ್ಟು 8 ಕಥಾ ಸಂಕಲನಗಳು, ಸುದರ್ಶನ, ರಾಜಯೋಗಿ ಸೇರಿದಂತೆ ಒಟ್ಟು 5 ಕಾದಂಬರಿಗಳು, ಬೆಳವಡಿ ಮಲ್ಲಮ್ಮ, ಬೆಂದ ಹೃದಯ, ಮುಂಡರಗಿಯ ಗಂಡುಗಲಿ, ಪಂಚಗಂಗಾ (ಆಕಾಶವಾಣಿ ತರಂಗ ರೂಪಕಗಳು) ಕನ್ನಡ ರಾಜ್ಯ ರಮಾರಮಣ-ಚರಿತ್ರೆ, ಕನ್ನಡ ಜನಪದ ಸಾಹಿತ್ಯ ಹಾಗೂ ಬೀಸುಕಲ್ಲಿನ ಪದಗಳು -ಕೃತಿಗಳು, ಪೂಜಾತತ್ವ, ಲೋಕನೀತಿ ಸೇರಿದಂತೆ ಒಟ್ಟು 11 ಸಂಪಾದಿತ ಕೃತಿಗಳು, ನನ್ನ ನೆನಪುಗಳು-ಆತ್ಮಚರಿತ್ರೆ, ಮಕ್ಕಳ ಸಾಹಿತ್ಯ, ವಿಮರ್ಶೆ-ಸಂಶೋಧನೆ ವಲಯದಲ್ಲೂ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯವು ಕೃಷ್ಣಶರ್ಮರಿಗೆ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಸಂದಿವೆ. ಧಾರವಾಡದ ತಮ್ಮ ಮನೆಯಲ್ಲಿ 1982ರ ಅಕ್ಟೋಬರ್ 30 ರಂದು ನಿಧನರಾದರು.