ಪತ್ರಕರ್ತ, ಬರಹಗಾರ ಬಿ.ಎಂ. ಹನೀಫ್ ಅವರು ಜನಿಸಿದ್ದು 1962 ಆಗಸ್ಟ್ 04ರಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೆಳ್ಳಾಯರು ಇವರ ಹುಟ್ಟೂರು. ಮಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದ ಇವರು ಕಾನೂನು ಪದವಿ ಪಡೆದಿದ್ದಾರೆ. ಜರ್ಮನಿಯ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಂ ಕಾಲೇಜಿನಲ್ಲಿ ವಾಣಿಜ್ಯ ಪತ್ರಿಕೋದ್ಯಮ ಕೋರ್ಸ್ ಮಾಡಿದ್ದಾರೆ.
ಮುಂಗಾರು ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಆರಂಭಿಸಿದ ಇವರು ಸುಧಾ ವಾರ ಪತ್ರಿಕೆ ಮುಖ್ಯಸ್ಥರಾಗಿ ದಶಕದ ಕಾಲ ಕೆಲಸ ಮಾಡಿದ್ದಾರೆ. ಪ್ರಸ್ತುತ ಪ್ರಜಾವಾಣಿಯಲ್ಲಿ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹನೀಫ್ ಅವರ ಪ್ರಮುಖ ಕೃತಿಗಳೆಂದರೆ ಅನನ್ಯ ಸಮಾಜವಾದಿ ಲೋಹಿಯಾ, ಇತಿಹಾಸ ಮತ್ತುಇಸ್ಲಾಂ, ಕತ್ತಲೆಗೆ ಯಾವ ಬಣ್ಣ, ಮಾತೇ ಮುತ್ತು. ಬಣ್ಣದ ಬುಗುರಿ, ಸಜ್ಜನ ರಾಜರಾರಣಿ ಎಸ್.ಎಂ.ಯಾಹ್ಯಾ, ಕೆಂಪರಾಜ ಅರಸು, ಕನಸು ಕನ್ನಡಿ, ಕೊಲಾಝ್ ಮುಂತಾದವು. ಇವರಿಗೆ ಬೆಂಗಳೂರು ತುಳು ಕೂಟದಿಂದ ತೌಳವಶ್ರೀ ಪ್ರಶಸ್ತಿ, ಮಾಧ್ಯಮ ಮಂದಾರ ಪ್ರಶಸ್ತಿ, ಕರಾವಳಿ ಸಿರಿ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಬ್ಯಾರಿ ಸಾಹಿತ್ಯ ಅಕಾಡೆಮಿ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ‘ಜಿನ್ನಾ ಕೋಮುವಾದಿಯೆ?’ ಅವರ ನೂತನ ಕೃತಿ.