ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಶ್ರೇಷ್ಠ ಬರಹಗಾರರೆನಿಸಿದ್ದಾರೆ. ಮಾರ್ಚ್ 16, 1929 ರಲ್ಲಿ ಮೈಸೂರಿನಲ್ಲಿ ಜನಿಸಿದರು.
ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ.ಮತ್ತು ಎಂ.ಎ.ಪದವಿಯನ್ನು ಗಳಿಸಿದ ರಾಮಾನುಜನ್ ಅವರು ದಕ್ಷಿಣ ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿ, 1958ರ ವರ್ಷದಲ್ಲಿ ಪುಣೆಯ ಡೆಕ್ಕನ್ ವಿಶ್ವವಿದ್ಯಾಲಯದಿಂದ ‘ಥಿಯೇಟ್ರಿಕಲ್ ಲಿಂಗ್ವಿಸ್ಟಿಕ್ಸ್’ ವಿಷಯದಲ್ಲಿ ಉನ್ನತ ಡಿಪ್ಲೋಮಾ ಪದವಿ ಪಡೆದರು. ಮುಂದಿನ ವರ್ಷದಲ್ಲಿ ಅಮೆರಿಕಕ್ಕೆ ತೆರಳಿದ ರಾಮಾನುಜನ್ 1963ರ ವರ್ಷದಲ್ಲಿ ಅಮೆರಿಕ ಇಂಡಿಯಾನ ವಿಶ್ವವಿದ್ಯಾನಿಲಯದಿಂದ ಭಾಷಾವಿಜ್ಞಾನದ ಪಿ.ಎಚ್.ಡಿ ಗೌರವವನ್ನು ಗಳಿಸಿದರು.ರಾಮಾನುಜನ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆಗಳನ್ನು ಕೊಡುವುದರ ಜೊತೆಗೆ ಜೊತೆಗೆ ಕನ್ನಡದ ಕಸ್ತೂರಿಯನ್ನು ವಿಶ್ವದೆಲ್ಲೆಡೆ ಇಂಗ್ಲಿಷ್ ಭಾಷೆಯ ಮೂಲಕ ಪಸರಿಸುವ ಮನೋಜ್ಞ ಕಾರ್ಯ ಮಾಡಿದರು.
1962 ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ಹಾಗೂ ದ್ರಾವಿಡ ಅಧ್ಯಯನದ ಅಧ್ಯಾಪಕರಾಗಿ ಸೇರಿದ ರಾಮಾನುಜನ್ 1993ರಲ್ಲಿ ನಿಧನರಾಗುವತನಕದ ತಮ್ಮ ಬಹುತೇಕ ವೃತ್ತಿ ಜೀವನವನ್ನು ಅಲ್ಲಿಯೇ ನಡೆಸಿದರು. ಜೊತೆಗೆ ವಿಸ್ಕಾಸಿನ್, ಬರ್ಕಲಿ, ಮಿಚಿಗನ್ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾ ಭಾಷೆಗಳ ಅಧ್ಯಯನ ಪೀಠ ಸ್ಥಾಪನೆ ಮಾಡಿದ ಕೀರ್ತಿ ಎ. ಕೆ. ರಾಮಾನುಜನ್ ಅವರಿಗೆ ಸಲ್ಲುತ್ತದೆ.
ಪ್ರಸಿದ್ದ ನವ್ಯ ಕವಿ ಗೋಪಾಲಕೃಷ್ಣ ಅಡಿಗರ ಪ್ರಭಾವದಿಂದ ಹೊರಬಂದು ಹೊಸ ಸಂವೇದನೆಗಳೊಂದಿಗೆ ತಮ್ಮದೇ ಆದ ರೀತಿಯಲ್ಲಿ ಕಾವ್ಯ ರಚಸಿದ ರಾಮಾನುಜನ್ ಅವರು ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಹೊಕ್ಕುಳಲ್ಲಿ ಹೂವಿಲ್ಲ’ ಇವರ ಪ್ರಥಮ ಸಂಕಲನ. ಪದ್ಯ ರಚನೆ, ಭಾಷಾ ಬಳಕೆ, ಪ್ರತಿಮೆಗಳ ಬಳಕೆ- ಈ ದೃಷ್ಟಿಯಿಂದ ಇವರ ನವ್ಯ ಕವನಗಳಿಗೆ ನವ್ಯ ಸಾಹಿತ್ಯದಲ್ಲಿ ಪ್ರತ್ಯೇಕಸ್ಥಾನ ಸಲ್ಲುತ್ತದೆ. . ‘ಹೊಕ್ಕುಳಲ್ಲಿ ಹೂವಿಲ್ಲ ಮತ್ತು ಇತರ ಕವಿತೆಗಳು’ ಅಲ್ಲದೆ ‘ಕುಂಟೋ ಬಿಲ್ಲೆ’, ‘ಮತ್ತೊಬ್ಬನ ಆತ್ಮಚರಿತ್ರೆ’ ಎ. ಕೆ. ರಾಮಾನುಜನ್ ಅವರ ಪ್ರಸಿದ್ಧ ಕೃತಿಗಳು. ರಾಮಾನುಜನ್ ಅವರ ಕೃತಿಗಳ ಸಮಗ್ರ ಸಂಪುಟವನ್ನು ಮನೋಹರ ಗ್ರಂಥಮಾಲೆ ಹೊರತಂದಿದ್ದು ಅದರಲ್ಲಿ ರಾಮಾನುಜನ್ ಅವರ ಮೂರು ಕವನ ಸಂಕಲನಗಳು, ಒಂದು ಕಾದಂಬರಿ, ಎರಡು ಸಣ್ಣ ಕತೆಗಳು, ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತ ಕಿರು ಹೊತ್ತಿಗೆಗಳು ಇಲ್ಲಿ ಕೂಡಿವೆ. ‘ನಡೆದು ಬಂದ ದಾರಿ’ ಗ್ರಂಥದಲ್ಲೂ, ‘ಸಾಕ್ಷಿ’ ಪತ್ರಿಕೆಯಲ್ಲೂ ಪ್ರಕಟವಾಗಿರುವ ಕವನಗಳೂ, ಐವತ್ತರ ದಶಕದಲ್ಲಿ ರಾಶಿ ಅವರ ‘ಕೊರವಂಜಿ’ಯಲ್ಲಿ ಪ್ರಕಟವಾದ ಹಲವು ನಗೆ ಬರಹಗಳೂ ಇಲ್ಲಿ ಸೇರಿವೆ.
ಯು.ಆರ್. ಅನಂತಮೂರ್ತಿಯವರ ಸುಪ್ರಸಿದ್ದ ಕಾದಂಬರಿ ‘ಸಂಸ್ಕಾರ’ವನ್ನು ಅವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ರಾಮಾನುಜನ್ ಅವರು ಇಂಗ್ಲಿಷಿನಿಂದಲೂ ಕನ್ನಡಕ್ಕೆ ಕೆಲವು ಕೃತಿಗಳನ್ನು ಭಾಷಾಂತರಿಸಿದ್ದಾರೆ.ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿದ್ದ ಪ್ರಮುಖ ಭಾರತೀಯ ಲೇಖಕರಲ್ಲಿ ರಾಮಾನುಜನ್ ಅವರೂ ಒಬ್ಬರು.