Article

ತಾತ್ವಿಕ ಸವಾಲುಗಳ ಹೊಸ ಆಯಾಮದ ‘ಅಂಗದ ಧರೆ’

65 ಪುಟಗಳ ಪುಟ್ಟ ಕಾದಂಬರಿ 'ಅಂಗದ ಧರೆ'. ಪುಸ್ತಕ ಓದುವ ಮುನ್ನ ಮುನ್ನುಡಿ, ಬೆನ್ನುಡಿ, ಲೇಖಕ ಮತ್ತು ಪ್ರಕಾಶಕರ ಮಾತು ಓದಿ ನಂತರ ಪುಸ್ತಕದ ಒಳಕ್ಕೆ ಪ್ರವೇಶಿಸುವುದು ರೂಢಿ. ಈ ಪ್ರಕ್ರಿಯೆ ಪುಸ್ತಕದ ವಿಷಯವಸ್ತುವನ್ನು ಗ್ರಹಿಸುವಲ್ಲಿ ಪೂರಕವಾಗಿಯೂ, ಮತ್ತು ಇನ್ನೇನೋ ಬೇರೆಯದು ಧ್ವನಿಸಿದ್ದಾಗಲೂ ಅದನ್ನು ಗ್ರಹಿಸುವ ಎಚ್ಚರಿಕೆಯಾಗಿಯೂ ಉಪಯುಕ್ತವಾಗುತ್ತದೆ. ಇದ್ಯಾವುದೂ ಅಂಗದ ಧರೆಯಲ್ಲಿ ಇಲ್ಲ. ಹಾಗಾಗಿ ಓದುಗರ ಅನುಭವಕ್ಕೆ ದಕ್ಕಿಸಿಕೊಂಡದ್ದಷ್ಟೆ.

'ಅಂಗದ ಧರೆ'ಯಲ್ಲಿ ಬಳಸಿರುವ ಜವಾರಿ ಭಾಷಾ ಸೊಗಡೇ ಅಷ್ಟು ಆಪ್ತ. ಒಂದೇ ಸಿಟ್ಟಿಂಗ್ ನಲ್ಲಿ ಓದಿಸಿಕೊಂಡು ಹೋಗುತ್ತದೆ. ಕಾದಂಬರಿ ತುಂಬ ತಾತ್ವಿಕ ಸವಾಲುಗಳನ್ನು ಎಸೆಯುತ್ತ ಸಾಗುತ್ತದೆ. ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳು ಸಿದ್ದರಾಮ, ರೇವಕ್ಕ, ಗುರುಬಸವ, ಮಹಾದೇವಿ ಅಕ್ಕ ಮತ್ತು ಒಂದು ಹಂತದ ನಂತರ ಕಾದಂಬರಿಗೆ ಬೇರೊಂದು ಆಯಾಮ ಕೊಡುವ ಷಡಕ್ಷರಿ.

ರೇವಕ್ಕ : ಹದಿನೈದರ ಎಳವೆಯ ಪೋರಿಯಾಗಿದ್ದಾಗಲೇ ಶರಣರ ಸದನ ಸೇರಿ ಅಲ್ಲಿನ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಾಕೆ. ಜನರ ಹಿತ ಬಯಸುವ ಮುಗ್ಧ ಮನಸ್ಸಿನವಳು. ಶರಣರ ಸದನ ಹೋಗಿ ಮಠವಾಗಿ, ಅಲ್ಲಿ ಮತ್ತಷ್ಟು ಆಳು ಕಾಳು, ಶಾಲಾ ಕಾಲೇಜುಗಳು, ಪ್ರವಚನದ ಕೆಸೆಟ್ಟು, ಪುಸ್ತಕಗಳ ಪ್ರಕಟ ಮಾಡುವುದು ಈ ಜಂಗಮ ಸ್ಥಿತಿಯಿಂದ ಸ್ಥಾವರ ಸ್ಥಿತ್ಯಂತರಕ್ಕೆ ಕಾರಣಿಭೂತಳು ಈ ರೇವಕ್ಕಳೇ. ಸದನದ ಅಂಗಳದಲ್ಲಿ ಯಾರೋ ಬೇಡವೆಂದು ತ್ಯಜಿಸಿದ ಮಗುವಿಗೆ ತಾನೇ ತಾಯಾದವಳು. ಗುರುಬಸವ ಎಂದು ಹೆಸೆರಿಟ್ಟು ಬಾಳಾ ಎಂದು ಕರೆಯುತ್ತ ಮಗನೆಂಬ ಮಾಯೆ ಹೊಕ್ಕವಳು. ಇತ್ತ ಮಠವು ವಿಸ್ತರಿದಂತೆ ದಿಕ್ಕು ದಿಕ್ಕುಗಳಿಂದ ಹರಿದು ಬರುವ ಭಕ್ತಗಣದ ದೇಖರೇಕಿ ಮಾಡುತ್ತ ದಾಸೋಹ ಕಾರ್ಯದಲ್ಲಿ ನಿರತಳಾದ ರೇವಕ್ಕ ಎಲ್ಲರ ಮೆಚ್ಚುಗೆ ಪಡೆದವಳು. ಲೌಕಿಕದಲ್ಲಿ ಯಾವ ಆಸ್ಥೆಯೂ ಇಲ್ಲದ ಸಿದ್ದರಾಮ ಮತ್ತು ಮಹಾದೇವಿಯಕ್ಕರ ಎದುರು ಮಠದ ಉಸ್ತುವಾರಿ ಈಕೆಯ ಹಿಡಿತದಲ್ಲಿಯೇ.

ಮಹಾದೇವಿಯಕ್ಕ: ಈಕೆ ಸಿದ್ಧರಾಮ ವಿವಿಯಲ್ಲಿ ಓದುವಾಗ ಕ್ಯಾಂಪಸ್ಸಿನಲ್ಲಿ ಇದ್ದವಳು. ಮದುವೆಯಾಗಿ, ಹುಟ್ಟಿದ ಮಗು ತೀರಿ, ಅತ್ತೆ-ಮಾವನ ದುಷ್ಟತನ, ಗಂಡನ ಕಿರುಕುಳಕ್ಕೆ ರೋಸಿ ಶರಣರ ಸದನ ಸೇರಿ ಅಲೌಕಿಕ ಜೀವನದತ್ತ ಮುಖ ಮಾಡಿದಾಕೆ. ಮಠದಲ್ಲಿ ರೇವಕ್ಕನ ಕುರಿತಾಗಿ ಆಡುವ ಮೆಚ್ಚಿಗೆಯ ಮಾತುಗಳನ್ನು ಮತ್ಸರ ಭಾವದಿಂದ ಕಾಣುತ್ತ, ಇಹದ ಸುಖಗಳನ್ನು ತ್ಯಜಿಸಿದವಳಿಗೆ ಏಕೆ ಈ ಪರಿಯ ಮೋಹ ಎಂದುಕೊಳ್ಳುತ್ತ ಲೌಕಿಕದ ಹಂಗು ಹರಿದುಕೊಳ್ಳುವಿಕೆಯಲ್ಲಿ ಹೆಣಗುತ್ತಿರುವವಳು.

ಷಡಕ್ಷರಿ: ಕಂತೀಭಿಕ್ಷೆ ಸಂಚಾರಿಯಲ್ಲಿ ಮಠ ಸೇರಿ ಮಠದಲ್ಲಿಯೇ ಬೆಳೆದಾತ. ಮಠಕ್ಕೆ ಬರುವ ಭಕ್ತಾದಿಗಳು, ದಾನ, ದತ್ತಿ, ಕಾಣಿಕೆಗಳಿಂದ ಹರಿದು ಬರುತ್ತಿದ್ದ ದುಡ್ಡು ನೋಡಿ ಹಣ ಲಪಟಾಯಿಸುವ ಯೋಜನೆ ಹೊಂದಿದ್ದವ. ಆಗಲೇ ಮೈತುಂಬಿ ನಿಂತಿದ್ದ ಹೆಣ್ಣು ರೇವಕ್ಕಳ ಮೇಲೂ ಆಸೆ ಹೊಂದಿದ್ದವ. ಆಕೆಗೆ ತನ್ನ ಯೋಚನೆಗಳನ್ನೆಲ್ಲ ಹೇಳಿಕೊಂಡಿದ್ದ. ಇಂಥಹ ನೀಚ ಬುದ್ಧಿಗಳನ್ನು ಬಿಡದಿದ್ದರೆ ಷಡಕ್ಷರಿಯ ದುಷ್ಟ ಯೋಚನೆಗಳ ಕುರಿತು ಫಿರ್ಯಾದಿ ಕೊಡುವುದಾಗಿ ಹೇಳುತ್ತಾಳೆ. ಅವಮಾನಿತನಾದ ಷಡಕ್ಷರಿ ತನ್ನ ಯೋಜನೆಗಳನ್ನು ರೂಪಿಸುತ್ತ ತಕ್ಕ ಕಾಲಕ್ಕಾಗಿ ಹೊಂಚು ಹಾಕಿ ಕಾಯಿತ್ತಿರುತ್ತಾನೆ.

ಸಿದ್ಧರಾಮ: ಕಾದಂಬರಿಯ ಮುಖ್ಯ ಪಾತ್ರಧಾರಿ. ಸಿದ್ದರಾಮ ಭತಗುಣುಕಿ ಎನ್ನುವ ಸಾಮಾನ್ಯ ಯುವಕನಾಗಿದ್ದ. ಓದಿನ ಹುಚ್ಚು ಹತ್ತಿಸಿಕೊಂಡಿದ್ದ. ಇವನ ಅಪ್ಪ ರೈತ ಪರೂತಪ್ಪನಿಗೆ ಇವನನ್ನ ಓದಿಸಲು ಸಗತಿ ಇಲ್ಲದವನು. ಅಪ್ಪನ ಸಲಹೆಯಂತೆ ಮನೆ ತೊರೆದು ಕಂತೀಭಿಕ್ಷೆ ಬೇಡುತ್ತ, ಕಾಸಿಗಾಗಿ ಸಣ್ಣಪುಟ್ಟ ಕೆಲಸ ಮಾಡುತ್ತ ಓದಿನಲ್ಲಿ ನಿರತನಾದ. ಮುಂದೆ ವಿಶ್ವವಿದ್ಯಾಲಯವೊಂದರಲ್ಲಿ ಪ್ರೊ. ಗದ್ದಗಿಮಠ ಅವರ ಮಾರ್ಗದರ್ಶನದಲ್ಲಿ ವಚನ ಸಾಹಿತ್ಯದಲ್ಲಿ ಸಂಶೋಧನೆ ಕೈಗೊಂಡ. ಹೀಗಿರುವಾಗ ಒಂದಿನ 'ಹೆರಸಾರಿ' ಪದದ ಅರ್ಥ ಹುಡುಕುತ್ತ ಅದನ್ನು ತನ್ನ ಅನುಭವದ ಮೂಲಕ ಆಗುಮಾಡಿಕೊಳ್ಳುತ್ತ ಪರಿಪೂರ್ಣನಾಗಬೇಕೆಂದುಕೊಳ್ಳುತ್ತಾನೆ.

ಇಂತಿಪ್ಪ ಸಿದ್ದರಾಮ ಒಂದಿನ ತನ್ನ ಎದೆಯ ದನಿಗೆ ಕಿವಿಗೊಟ್ಟು ಹೊರಟೇ ಬಿಡುತ್ತಾನೆ. ಪರಿಪೂರ್ಣತೆ ಅರಿಯಲು ಅಪರಿಪೂರ್ಣತೆಯ ಹಾದಿ ಹಿಡಿದು. ಹೀಗೆ ಅಲೆದಾಡುತ್ತ, ಏನನ್ನೋ ಕಂಡುಕೊಳ್ಳುತ್ತ, ಇನ್ನೇನೋ ಕಾಣುತ್ತ, ಅದನ್ನೂ ತರ್ಕಿಸುತ್ತ ಕೊನೆ ಮೊದಲಿಲ್ಲದ ಈ ಪಯಣಕ್ಕೆ ಮಧ್ಯಂತರದ ಬಿಂದುವಿದೆ ಎನ್ನುವುದನ್ನ ಕಂಡುಕೊಳ್ಳುತ್ತಾನೆ. ಈ ಕಂಡುಕೊಂಡದ್ದನ್ನು ಇತರಿಗೂ ಕಾಣಿಸಬೇಕೆಂಬ ಕನಸುತ್ತಾನೆ. ಮತ್ತದನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕುತ್ತಾನೆ.

'ಜಂಗಮನಿಗೇಕೆ ಮಠವೆಂಬ ಸ್ಥಾವರದ ಚಾಕಟ್ಟು ಎಂದು ನನ್ನಷ್ಟಕ್ಕೆ ನಾ ಹೂಡಿಕೊಂಡ ವಾದದ ತಿರುಳು? ಇಲ್ಲ, ಮಠದ ಮೈಲಿಗೆಯ ಗೊಡವೆ ನನಗೆ ಬೇಡ. ಲಿಂಗವನ್ನು ಅಂಗೈಯಲ್ಲಿ ಹಿಡಿದುಕೊಂಡಷ್ಟು ಸರಳವಾಗಿ ಪೂರ್ಣವಿದಂ ಅನ್ನು ಸಾಧಿಸಬೇಕು. ತಾರತಮ್ಯ ಅಳಿಸಿ ಸಹಜವಾಗಿ ಶಿವನನ್ನು ಅರಸಿ ಬರುವವರ ಗುರು ನಾನಾಗಬೇಕು. ಗುರುವಾದವನಿಗೆ ಅರಿವಾಗದ ಬಹಳಷ್ಟು ವಿಚಾರಗಳಿವೆ ಎಂದು ಒಪ್ಪಿಕೊಳ್ಳುವ ಗುರು ನಾನಾಗಬೇಕು. ನನಗೆ ತಿಳಿದಿಲ್ಲ. ಯಲ್ಲಾರು ಕೂಡಿ ವಿಚಾರ ಮಾಡಿ ನೋಡೂಣೇನು ಎಂದು ಹೇಳುವ ಮಂಟಪದ ಮಾತು ನನ್ನ ಗುರಿ, ಹಾದಿಗಳನ್ನು ಹುಟ್ಟಿಸಬೇಕು. ಅರಿವಿಲ್ಲದಿರಿವುದನ್ನು ಅಸಂಜಸ ವ್ಯಾಖ್ಯಾನದ ಮೂಲಕ ಪ್ರತಿಷ್ಠಾಪಿಸುವ ಭಂಡ ಗುರುವಿನ ದಾರಿ ನನಗೆ ಬೇಡ....' (ಅಂಗದ ಧರೆ ಕಾದಂಬರಿಯಿಂದ ಪುಟ ಸಂಖ್ಯೆ - 12.

ಈ ಥರದ ಗುರುವಾಗಬೇಕೆಂದು ಹೊರಟ ಸಿದ್ದರಾಮನಿಗೆ ಬಯಲೇ ಆಲಯ. ಪೂರ್ಣಮಿದಂ ಶಿವ. ಕಂತಿಭಿಕ್ಷೆಯಲಿ ನೀಡಿದ್ದೆ ಶಿವಪ್ರಸಾದ. ಇಂತಿಪ್ಪ ಸಿದ್ದರಾಮ ಸಾಕಷ್ಟು ಪ್ರಸಿದ್ಧಿ ಗಳಿಸುತ್ತಾನೆ. ಶರಣರ ಸದನ ಮುಂದೆ ಮಠವಾಗಿ, ಪ್ರವಚನಗಳು ಶುರುವಾಗುತ್ತವೆ. ದಾಸೋಹ ಕಾರ್ಯ ಆರಂಭವಾಗುತ್ತದೆ. ಸುತ್ತಮುತ್ತಲಿನ ಊರೂರುಗಳಲ್ಲಿ ಶಾಲೆ ಕಾಲೇಜುಗಳನ್ನು ತೆರೆಯಲಾಗುತ್ತದೆ. ಇದೆಲ್ಲದರ ಹಿಂದೆ ರೇವಕ್ಕಳದೇ ಅಕಲು. ಆಕೆಯ ಸಮಜಾಯಿಷಿಗೆ ಸಿದ್ಧರಾಮನೂ ಸಮ್ಮತಿ ಸೂಚಿಸುತ್ತಿದ್ದ.

ವೈರುಧ್ಯಗಳು ಕಂಡು ಬರುವುದು ಇಲ್ಲಿಯೇ... ಲೌಕಿಕ ಜಗತ್ತಿನವಳಾದ ರೇವಕ್ಕ ಮಠ, ದಾಸೋಹ, ಹಿತವಚನ, ಶಾಲೆ ಕಾಲೇಜುಗಳ ಕುರಿತು ಚಿಂತಿಸುವಾಕೆ. ಜಂಗಮ ಸಿದ್ದರಾಮ ಸ್ಥಾವರದ ಆಸೆ ಬಿಟ್ಟವನು, ಲೌಕಿಕದ ಮೋಹ ತೊರೆದವನು, ಶಿವನನ್ನು ಕಾಣಹೊರಟವನು. ಪರಿಪೂರ್ಣತೆಯನ್ನು ಕಾಣಹೊರಟವನು. ಪರಿಪೂರ್ಣತೆ ಸಿಕ್ಕಿತಾ? ಅನ್ನೋದನ್ನು ಓದುಗರೇ ಕಂಡುಕೊಳ್ಳಬೇಕು.

ನಿತ್ಯವೂ ತನ್ನನ್ನು ವಿಮರ್ಶೆಗೆ ಒಡ್ಡಿಕೊಳ್ಳುತ್ತಿದ್ದ, ಗುರು ಸ್ಥಾನದಲ್ಲಿ ನಿಂತಿದ್ದರು ತನ್ನೂ ಆವರಿಸುತ್ತಿದ್ದ ಮಾಯೆಗೆ ಬೆಚ್ಚಿ ತನ್ನನ್ನು ತಾನು ದಂಡಿಸಿಕೊಳ್ಳುತ್ತ, ಇಂದ್ರಿಯಲೋಭಗಳ ನಿಗ್ರಹದಲ್ಲಿ ನಿತ್ಯವೂ ತೊಡಗಿರುತ್ತಾನೆ. ಅಂತಹ ಸಿದ್ಧರಾಮ ಕೊನೆಗೆ ಸಂಜೆಯ ಮಂಟಪದ ಗೋಷ್ಠಿಯಲ್ಲಿ ರೇವಕ್ಕನಿಗೆ ಮಾನವಾಗಿರುವಂತೆ ಹೇಳಿ ತನ್ನ ಅಭಿಪ್ರಾಯ ಮಂಡಿಸುತ್ತಾನೆ. ಗುರುಬಸವನನ್ನು ಮಠದ ಮರಿದೇವರೆಂದು ನೇಮಕ ಮಾಡುತ್ತಾನೆ.

ಸಿದ್ಧಾರಾಮ ಸ್ಥಾವರದ ಬದುಕು ಸಾಕೆಂದು ನಿರ್ಧರಿಸಿದನೆ...? ಜಂಗಮನಾಗಿ ಮತ್ತೆ ಅವನ ಪಯಣ ಶುರುವಾಯಿತೆ...? ಹೊಸದೇನನ್ನೋ ಮತ್ತೆ ಕನಸಿದ್ದಾನೆಯೇ.. ಹೊಸತೇನೋ ಕಟ್ಟ ಹೊರಟಿದ್ದಾನೆ? ಹೊಸ ದಾರಿ ಹಿಡಿದಿದ್ದಾನೆ. ಬೇರೆಯವರು ಆ ದಾರಿ ತುಳಿದಿರಬಹುದು. ಆತನಿಗಿದು ಮತ್ತೆ ಹೊಸ ಹಾದಿ... ಕೊನೆ ಮೊದಲಿಲ್ಲದ ಹಾದಿ. ಅನಂತಯಾತ್ರೆಗೆ ಕೊನೆಯಿಲ್ಲ.... ಮಧ್ಯಂತರದ ಬಿಂದು? ಇರಬಹುದಾ? ಅದು ಜಂಗಮ ಸಿದ್ಧರಾಮನಿಗೆ ದಕ್ಕಬಹುದಾ...? ಈಗವನು ಮತ್ತಷ್ಟು ಮಾಗಿದ್ದಾನೆಯೇ...? ಈಗ ಅವನು ತುಳಿಯುವ ಹಾದಿಗೆ ಪರಿಪೂರ್ಣತೆ ದಕ್ಕಿತಾ? ಸಧ್ಯಕ್ಕೆ ಇಂಥವೆ ತಲೆತುಂಬ ಪ್ರಶ್ನೆಗಳು.

ಕಾದಂಬರಿಯ ಆರಂಭದಲ್ಲಿ ಅಲ್ಲಮ ಪ್ರಭುವಿಮ ಒಂದು ವಚನ ಹೀಗಿದೆ:

"ಅಂಗದ ಧರೆಯ ಮೇಲೆ ಮೂರು ಬಾವಿಯುಂಟು
ಮೊದಲ ಬಾವಿಯ ಮುಟ್ಟಿದಾತ ಅಂಗಸಂಗಿಯಾದನು
ನಡುವಣ ಬಾವಿಯ ಮುಟ್ಟಿದಾತ ಉತ್ಪತ್ಯ-ಸ್ಥಿತಿ-ಲಯಕ್ಕೊಳಗಾದವನು
ಮೇಲಣ ಬಾವಿಯ ಮುಟ್ಟಿದಾತ ಜೀವನ್ಮುಕ್ತನಾದನು
ಇವ ತಟ್ಟದೆ ಮುಟ್ಟದೆ ಹೋದರು ನೋಡಾ, ಪರಬ್ರಹ್ಮ ದಾಂಟಿ,
ಗುಹೇಶ್ವರಲಿಂಗದಲ್ಲಿ ಹಂಗು ಹರಿದ ಶರಣರು!"

(ಈ ಕಾದಂಬರಿಯಲ್ಲಿ ಬರುವ ಪಾತ್ರಧಾರಿಗಳು ಎಲ್ಲೆಲ್ಲಿ ಯಾವ ಹಂತದಲ್ಲಿ ಇದ್ದಾರೆ ಅನ್ನೋದು ಓದುಗರಿಗೆ ಈ ವಚನದಿಂದ ಅರ್ಥವಾಗುತ್ತದೆ..)

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರುಕ್ಮಿಣಿ ನಾಗಣ್ಣವರ್