Article

‘ಮಾನಸ ಸರೋವರ’ದಲ್ಲಿ ಮನೋವೈದ್ಯ ಡಾ.ವಿನೋದ ಕುಲಕರ್ಣಿ

ಹುಬ್ಬಳ್ಳಿಯ ಸುಪ್ರಸಿದ್ಧ ಮನೋವೈದ್ಯರಾದ ಡಾ.ವಿನೋದ ಕುಲಕರ್ಣಿ ದಕ್ಷಿಣ ಭಾರತದ ಶ್ರೇಷ್ಠ ಚಿಕಿತ್ಸಕರು. ವೃತ್ತಿಯಲ್ಲಿ ಹೆಸರು ಮಾಡಿದವರು ಪ್ರವೃತ್ತಿಯಲ್ಲಿ ಬರಹಗಾರರಾದರೆ ಸಮಾಜಕ್ಕೆ ದೊಡ್ಡ ಲಾಭ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಗಣ್ಯರ ಬರಹಕ್ಕೆ ಅಥೆಂಟಿಸಿಟಿ ಇರುತ್ತದೆ.  ಕೇವಲ ಸಾಹಿತ್ಯದ ವಿದ್ಯಾರ್ಥಿಗಳು ಬರೆಯುತ್ತಾರೆ ಎಂಬ ಕಾಲ ಈಗ ಮುಗಿದು ಹೋಗಿದೆ. ನಾಲ್ಕು ದಶಕಗಳ ಸುದೀರ್ಘ ವೈದ್ಯಕೀಯ ಅನುಭವದಲ್ಲಿ ಸಾವಿರಾರು ರೋಗಿಗಳಿಗೆ ಕೇವಲ ಚಿಕಿತ್ಸೆ ನೀಡಿಲ್ಲ; ಮರುಜನ್ಮ ನೀಡಿದ್ದಾರೆ. ವೈಯಕ್ತಿಕ ಕಾಳಜಿ, ವೃತ್ತಿಪರತೆ, ಯೋಗ ಧ್ಯಾನ, ಸಂಗೀತ, ಸಾಹಿತ್ಯದ ಅಭಿರುಚಿ ಅವರನ್ನು ನನಗೆ ಹೆಚ್ಚು ಹತ್ತಿರ ತಂದಿದೆ. 

ಅವರ ಚೊಚ್ಚಲ ಕೃತಿ "ಮಾನಸ ಸರೋವರ" ಪ್ರಕಟವಾಗಿ ಎಂಟು ವರ್ಷಗಳಾಯಿತು.  ಸಾಹಿತ್ಯ ಮಿತ್ರ ಕೊಪ್ಪಳದ ಹನುಮಂತಪ್ಪ ಅಂಡಿಗಿ ಉತ್ಸಾಹ ತೋರಿದ್ದರಿಂದ ಪುಸ್ತಕ ರೂಪ ಪಡೆದಿದೆ ಎಂಬುದು ಅಭಿನಂದನೀಯ. ಮನೋವಿಜ್ಞಾನ,ಮನೋರೋಗ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಒಟ್ಟು ನಲವತ್ತೊಂದು ಲೇಖನಗಳಿವೆ. ಸಾಮಾನ್ಯ ಓದುಗರಿಗೆ ವೈದ್ಯಕೀಯ ಭಾಷೆ ಖಂಡಿತವಾಗಿ ಅರ್ಥವಾಗುವುದಿಲ್ಲ ಎಂಬ ಪ್ರಜ್ಞೆ ಇಟ್ಟುಕೊಂಡು ಎಲ್ಲರೂ ಓದುವಂತಹ ಭಾಷೆಯಲ್ಲಿ ಲೇಖನಗಳನ್ನು ಬರೆದಿದ್ದಾರೆ. ‌ ಆಕರ್ಷಕ ನಿರೂಪಣೆ ಈ ಕೃತಿಯ ಹೆಗ್ಗಳಿಕೆ. ಎರಡು ದಶಕಗಳಿಂದ ಜೀವನಶೈಲಿ ತರಬೇತಿ ಮತ್ತು ಆಪ್ತಸಮಾಲೋಚನೆಯಲ್ಲಿ ಆಸಕ್ತಿ ಹೊಂದಿದ ನನಗೆ ಅನೇಕ ಮನೋವೈಜ್ಞಾನಿಕ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. 

ಪ್ರತಿ ದೇಶದ ಶಕ್ತಿ ಎಂದರೆ ಅಲ್ಲಿನ ಜನರ ಆರೋಗ್ಯ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯದ ವ್ಯಾಖ್ಯಾನ ತನ್ನ ಸ್ವರೂಪ ಬದಲಿಸಿಕೊಂಡಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಎಂಬ ವಿಂಗಡನೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೈಹಿಕ ಆರೋಗ್ಯದ ಕುರಿತು ಇರುವ ಕಾಳಜಿ ಮಾನಸಿಕ ಮತ್ತು ಆಧ್ಯಾತ್ಮಿಕದ ಕುರಿತು ಇಲ್ಲ. ಸಂಕೋಚ, ಬಿಗುಮಾನ ಮತ್ತು ಅಜ್ಞಾನಗಳ ಕಾರಣದಿಂದ ಈ ವಿಜ್ಞಾನ ನಿರೀಕ್ಷಿಸಿದಷ್ಟು ಬೆಳೆದಿಲ್ಲ. ಈ ಕಾರಣದಿಂದ ಲಕ್ಷಾಂತರ ಜನ ಹೇಳಲಾಗದ ಮನೋವೇದನೆ ಅನುಭವಿಸಿ ದುಃಖದಲ್ಲಿ ಮುಳುಗಿ ಹೋಗುತ್ತಾರೆ. ಮನೋರೋಗ ಕೂಡ ದೈಹಿಕ ರೋಗದಂತೆ ಸಹಜ ಎಂಬುದನ್ನು ಮಡಿವಂತ ಮನಸು ಒಪ್ಪಿಕೊಳ್ಳುವುದಿಲ್ಲ. ವಿಚಿತ್ರ ಎಂದರೆ ಸುಶಿಕ್ಷಿತರು,ಅದರಲ್ಲೂ ವಿಶೇಷವಾಗಿ ವೈದ್ಯರು ಕೂಡ ಮಾನಸಿಕ ಕೇಂದ್ರಗಳಿಗೆ ಹೋಗುವುದನ್ನು ಭಯಾನಕ ಮತ್ತು ಅವಮಾನ ಎಂದು ಭಾವಿಸುತ್ತಾರೆ. ಗ್ರಾಮೀಣ ಜನ ದೆವ್ವ, ಭೂತ ಮತ್ತು ಆರಾಧನೆಗಳಲ್ಲಿ ಕಳೆದು ಹೋಗುತ್ತಿರುವುದು ದುರಂತ. ಸೂಕ್ತ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆ ಮೂಲಕ ಅದ್ಭುತ ಪವಾಡಗಳನ್ನು ಡಾ.ಕುಲಕರ್ಣಿ ಅವರು ನಿರೂಪಿಸಿದ್ದಾರೆ. ವೈಯಕ್ತಿಕವಾಗಿ ಮರುಜೀವ ಪಡೆದ ರೋಗಿಗಳಿಗೆ ಸಾಕ್ಷಿಯಾಗಿದ್ದೇನೆ.

ಡಿಪ್ರೆಶನ್ ತುಂಬಾ ಸಾಮಾನ್ಯ ಅನುಭವ ಆದರೆ ಇದು ಅಲಕ್ಷ್ಯ ಮಾಡಿದರೆ ರೋಗವಾಗಿ ಉಲ್ಬಣಗೊಂಡು ಬಿಡುತ್ತದೆ. ವ್ಯಕ್ತಿ ತನ್ನ ಮಿತಿ ಕಳೆದುಕೊಂಡು ಹುಚ್ಚನಾಗುವ ಮೊದಲು ಚಿಕಿತ್ಸೆ ಪಡೆಯುವ ವಿಧಾನಗಳನ್ನು ಸಮಯೋಚಿತವಾಗಿ ವಿವರಿಸಿದ್ದಾರೆ.  ನರ್ಕೋ ಎನಲೈಸಿಸ್ ಚಿಕಿತ್ಸೆಗೆ  ಇಡೀ ದಕ್ಷಿಣ ಭಾರತದಲ್ಲಿ ಇರುವ ಕೆಲವೇ ಕೆಲವು ವೈದ್ಯರಲ್ಲಿ ಡಾ.ಕುಲಕರ್ಣಿ ಪ್ರಮುಖರು. ಯುರೋಪ್ ಮನೋ ವೈದ್ಯಕೀಯ ರಂಗದಲ್ಲಿ ತುಂಬಾ ಸಂಶೋಧನೆ ಮಾಡುತ್ತಲೇ ಇದೆ. ಅವರು ತಮ್ಮ ಪ್ರಯೋಗದಿಂದ ನಿರೂಪಿಸಿದ ವಿಧಾನಗಳನ್ನು ಬಳಸಲು ಭಾರತೀಯ ವೈದ್ಯರು ಹಿಂದೇಟು ಹಾಕುತ್ತಾರೆ. ಕೇವಲ ಮಾತ್ರೆಗಳ ಮೂಲಕ ಗುಣಪಡಿಸಲು ಹೆಣಗುತ್ತಾರೆ.

ಆದರೆ ಇ.ಸಿ.ಟಿ. ಮತ್ತು ನರ್ಕೋ ಎನಲೈಸಿಸ್ ನಂತಹ ಪರಿಣಾಮವಾಗಿ ಚಿಕಿತ್ಸೆ ನೀಡಲು ಆತ್ಮವಿಶ್ವಾಸ ಮತ್ತು ಅನುಭವ ಬೇಕಾಗುತ್ತದೆ. ಇಂದಿನ ಪೀಳಿಗೆಯ ವೈದ್ಯರು ಮತ್ತು ಜನರಿಗೆ ಈ ಕುರಿತು ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಕೃತಿಯಲ್ಲಿ ಎದ್ದು ಕಾಣುತ್ತದೆ. ಮಾತನಾಡುವುದು ಸುಲಭ ಆದರೆ ಅನಿಸಿದ್ದನ್ನು ಓದುವ ಹಾಗೆ ಬರೆಯುವುದು ತುಂಬಾ ಕಷ್ಟ ಮತ್ತು ಕಠಿಣ. ಹೀಗಿರುವಾಗ ನಾಡಿನ ಹೆಸರಾಂತ ಪತ್ರಿಕೆಗಳ ಅಂಕಣ ಬರಹಗಾರರಾಗಿರುವ ಡಾ.ಕುಲಕರ್ಣಿ ಅವರಿಗೆ ಭಾಷಾ ಬಳಕೆಯ ಸಾಮರ್ಥ್ಯ ಲಭಿಸಿರುವುದು ಅಭಿನಂದನೀಯ.

ಇಲ್ಲಿನ ಲೇಖನಗಳಲ್ಲಿ ರೋಗದ ಲಕ್ಷಣಗಳ ಜೊತೆಗೆ ಚಿಕಿತ್ಸಾ ವಿಧಾನದ ಅನುಕೂಲಗಳನ್ನು ಸರಳವಾಗಿ ನಿವೇದಿಸಿದ್ದಾರೆ. ಮನಸು ತುಂಬಾ ವಿಚಿತ್ರ ಮತ್ತು ವಿಶಾಲ ಸರೋವರ. ಅಸಂಖ್ಯ ಸುಳಿಗಳು. ಸಿಕ್ಕು ಒದ್ದಾಡುವುದೊಂದು ಹಿಂಸೆ. ಮನದೊಳಗೆ ಮುಕ್ಕೋಟಿ ದೇವತೆಗಳು ಮತ್ತು ದಶಕೋಟಿ ರಾಕ್ಷಸರನ್ನು ಸಂರಕ್ಷಣೆ ಮಾಡುವಷ್ಟು ಜಾಗವಿದೆ. Mind has unlimited storage capacity, it captures everything in its own way but one should handle with positive perception. ಕೊಂಚ ಆಯ ತಪ್ಪಿ,ನಕಾರಾತ್ಮಕವಾದರೆ ಬರೀ ರಾಕ್ಷಸರು ಉಳಿದುಕೊಂಡು ಬಿಡುತ್ತಾರೆ ಆಗ ಮನುಷ್ಯ ಮನುಷ್ಯನಾಗಿ ಉಳಿಯುವುದಿಲ್ಲ. ‌ ಅಂತಹ ವಿಚಿತ್ರ ಮನೋ ವ್ಯಾಪಾರವನ್ನು ಹಾನಿಯಾಗದಂತೆ ನಿಯಂತ್ರಣ ಮಾಡುವಾಗ ಕೆಲವೊಮ್ಮೆ ಜೋಲಿ ಹೋಗುತ್ತದೆ. 
ಹಾಗೆ ಮೈ ಮರೆತು ಜೋಲಿ ಹೋದಾಗ ಮನೋ ಸಮಾಲೋಚನೆ ಅತ್ಯಗತ್ಯ. ಉಲ್ಬಳಗೊಂಡಾಗಲೂ ಸೂಕ್ತ ಚಿಕಿತ್ಸೆ ಪಡೆದು ಹೊರ ಬರಬಹುದು ಎಂಬುದನ್ನು ವೈದ್ಯಕೀಯ ವಿಜ್ಞಾನ ಸಾಬೀತು ಪಡಿಸಿದೆ.

ಹಿರಿಯ ವೈದ್ಯಕೀಯ ಬರಹಗಾರ ಡಾ.ಸಿ.ಆರ್.ಚಂದ್ರಶೇಖರ ಅವರ ಅರ್ಥಪೂರ್ಣ ಮುನ್ನುಡಿ, ಯುವ ವೈದ್ಯೆ ಡಾ.ಕೆ.ಎಸ್.ಪವಿತ್ರ ಅವರ ನಲ್ನುಡಿ ಕೃತಿ ಪ್ರವೇಶಕ್ಕೆ ಪೂರಕ.  ನಮ್ಮ ಸನಾತನ ಮತ್ತು ಆಯುರ್ವೇದ ಶಾಸ್ತ್ರ ಹೇಳಿಕೊಟ್ಟ ಜೀವನಶೈಲಿಯ ಯೋಗ ಧ್ಯಾನ ಸೂತ್ರಗಳು ನಮ್ಮ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಕಾಪಾಡುವಲ್ಲಿ ನೆರವಾಗುವುದನ್ನು ಕೊರೋನಾ ಕಲಿಸಿದೆ. ಹೀಗಾಗಿ ಪ್ರತಿಯೊಬ್ಬರೂ ಒಮ್ಮೆ 'ಮಾನಸ ಸರೋವರ' ಪ್ರವೇಶಿಸಿ, ಅರ್ಥಮಾಡಿಕೊಂಡು ಸಾಮಾಜಿಕ ಮತ್ತು ವೈಯಕ್ತಿಕ ಸ್ವಾಸ್ಥ್ಯ ಕಾಪಾಡುವ ಹೊಣೆಗಾರಿಕೆಯನ್ನು ನಿರ್ವಹಿಸಲು ಮುಂದಾಗಬೇಕು. ಡಾ.ವಿನೋದ ಕುಲಕರ್ಣಿ ಅವರನ್ನೊಮ್ಮೆ ಸಹಜವಾಗಿ ಕಾಣಲೂ ಬಹುದು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿದ್ದು ಯಾಪಲಪರವಿ