Article

ಕಾದಂಬರಿಯ ಬಟ್ಟೆ ತೊಟ್ಟ ಕಾವ್ಯ `L'

ಕಾದಂಬರಿಯ ಬಟ್ಟೆ ತೊಟ್ಟ ಕಾವ್ಯ " L" ಮತ್ತು ಕಾವ್ಯವೇ ಬಟ್ಟೆಯಾದ ಕಾದಂಬರಿ- ಜೋಗಿಯವರ ಕಾದಂಬರಿ. ಉತ್ಕಟವಾಗಿ ಓದಿಸಿದ ನಿಬಿಡವಾದ ಭಾವಗಳ ಗುಂಫನ. ರೆಂಜೆ ಹೂವಿನ ತೀವ್ರತರವಾದ ಉಚ್ಛಸ್ಥಾಯಿಯ ಕಂಪನ್ನು ಮಂದ್ರವಾಗಿ ಊದುತ್ತಾ ಸಾಗುವಂತಿರುವ ಲಕ್ಷ್ಮಣ ನೀಲಂಗಿಯ ಭಾವತರಂಗಗಳು.

ಪ್ರಕೃತಿ ಸ್ಪಂದಿಸುತ್ತೆ. ನಾವೂ ಅದೇ ಪ್ರಕೃತಿಯ ಭಾಗ. ನಮ್ಮನ್ನೂ ಅದು ಬಿಚ್ಚಿಕೊಳ್ಳಲು ಕೋರುತ್ತೆ; ಬಿಡುಗಡೆಯಾಗಪ್ಪಾ ಅಂತ ಗೋಗರೆಯುತ್ತೆ. ಲಕ್ಷ್ಮಣನಿಗೆ ಇಲ್ಲಿ ಬಿಡುಗಡೆಗೊಳ್ಳಲು ಹಪಹಪಿ. ಕವಿತೆ ಅದಕ್ಕಿರುವ ಮಾರ್ಗ. ಬಿಡುಗಡೆ ಗಮ್ಯ. ಒಳಗಿನ ನಿಬಿಡವಾದ ತಾಕಲಾಟಗಳು ಆತನನ್ನು ಹಿಡಿದಿಟ್ಟಿವೆ. ಕೊನೆಗೂ ಬಿಡುಗಡೆಗೊಂಡು ನಿರಾಳತೆ ಅನುಭವಿಸಿದನಾ? ಇದು ಶಾಶ್ವತವಾಗಿ ಇರುವ ಪ್ರಶ್ನೆ. ಆದರೆ ಕವಿತೆಗಳು ಆತನ ತಾಯಿಯ ಮಡಿಲು. ನೆಲದಿಂದ ಮೇಲಕ್ಕೇರುವ ಹಗ್ಗ. ಆದರೆ, ಮತ್ತೆ ಅಧೋಪಾತವನ್ನು ಅನುಭವಿಸುತ್ತಾ ತನ್ನ ಕವಿತೆಯ ಮೂಲಕ ಊರ್ಧ್ವಪಾತವನ್ನು ಕಂಡಂತೆ ಕಾಣುತ್ತಾ ಸಾಗುತ್ತಾ ಹೋಗುತ್ತೆ ಆತನ ಬದುಕು.

ವಾದನ ಮೀಮಾಂಸೆಯಲ್ಲಿ ಬರುವ ವಿಚಾರ: ಅತಿ ಕಡಿಮೆ ಪಾಠಾಕ್ಷರಗಳನ್ನು ಬಳಸಿ ಆಳವಾದ ಭಾವ ತೀವ್ರತೆಯನ್ನು ಗಾನಕ್ಕೆ ಒದಗಿಸುವ ವಾದನ ಪಟುತ್ವ ಶ್ರೇಷ್ಠ ಎಂದು. ಇಲ್ಲಿ ಶಬ್ದಗಳು ವಿನಾಕಾರಣ ಚೆಲ್ಲಲ್ಲಿಲ್ಲ. ಶಬ್ದಗಳ ಅಪಮೌಲ್ಯವಿಲ್ಲ. ಜೋಗಿಯವರು ಸಂಗೀತದ ಹದಕ್ಕೆ ಈ ಕಾದಂಬರಿಯನ್ನು ತಂದಿದ್ದಾರೆ.

ಕಾವ್ಯವನ್ನು ಜಾಸ್ತಿ ಬಗೆಯಬಾರದು. ಬಗೆದರೆ ಕಾವ್ಯ ಸಾಯುತ್ತೆ. ಇದು ಕಾದಂಬರಿಯಲ್ಲಿ ಆನುಷಂಗಿಕವಾಗಿ ಬರುವ ಮಾತು.ಲಕ್ಷ್ಮಣ ಕಾವ್ಯವನ್ನು ಬದುಕಿದ್ದಾನೆ. ಇದೂ ಸತ್ಯ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಬುಕ್ ಬ್ರಹ್ಮಗೆ ಭೇಟಿ ನೀಡಿ: ಎಲ್

ಕೃಷ್ಣ ಪ್ರಕಾಶ ಉಳಿತ್ತಾಯ