ಪ್ರವರ ಕೊಟ್ಟೂರನ ‘ಒಂದು ಮುತ್ತಿನಿಂದ ಕೊಲ್ಲಬಹುದು' ಎನ್ನುವ ಕವನ ಸಂಕಲನ ನನ್ನ ಕೈ ಸೇರಿ ಅದಾಗಲೇ ತಿಂಗಳ ಮೇಲಾಗಿತ್ತು. ಕವನ ಸಂಕಲನದ ಶೀರ್ಷಿಕೆ ಆಕರ್ಷಕವಾಗಿದ್ದರಿಂದ ಅದರಲ್ಲಿನ ಅಷ್ಟೂ ಕವನಗಳನ್ನು ಬೇಗ ಓದಿ ಮುಗಿಸಿ ಬಿಡಬೇಕು ಎಂಬ ತುಡಿತವಿದ್ದರೂ ನನ್ನ ವೈಯಕ್ತಿಕ ಕೆಲಸದ ಕಾರಣದಿಂದಾಗಿ ಓದಲಾಗಿರಲಿಲ್ಲ. ಆದರೆ ಮೊನ್ನೆಯಷ್ಟೇ ಪುಸ್ತಕವನ್ನು ಓದಲು ಕೈಗೆತ್ತಿಕೊಂಡು ಇವತ್ತು ಎಲ್ಲವನ್ನೂ ಮುಗಿಸಿದೆ. ನನಗೆ ಕವನಗಳನ್ನು ಒಂದೇ ಗುಕ್ಕಿಗೆ ಓದಿ ಮುಗಿಸಲಾಗುವುದಿಲ್ಲ. ಏಕೆಂದರೆ ಕವನಗಳ ಉದ್ದ, ಆಳ, ಅಗಲ ಎಲ್ಲವೂ ಒಂದೇ ಓದಿಗೆ ದಕ್ಕುವವದಿಲ್ಲ. ಒಂದು ಕವನವನ್ನು ಓದಲು ಒಂದು ಒಳ್ಳೆಯ ಮೂಡು ಬೇಕಾಗುತ್ತದೆ. ಆಗ ಮಾತ್ರ ಕವನ ಅರ್ಥವಾಗುತ್ತದೆ. ಒಂದು ಕವನದ ಓದು ಖಂಡಿತ ಕಥೆಯ ಓದಿನಂತಿಲ್ಲ. ಕಥೆಯಾದರೆ ನಿಮ್ಮನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಮತ್ತು ಅದಕ್ಕೆ ಅಷ್ಟೊಂದು ತಾಳ್ಮೆಯ ಅವಶ್ಯಕತೆ ಇರುವುದಿಲ್ಲ. ಆದರೆ ಕವನದ ಓದು ಹಾಗಲ್ಲ. ಅದು ತುಂಬಾ ತಾಳ್ಮೆಯನ್ನು ಬೇಡುತ್ತದೆ. ಅದಕ್ಕೊಂದು ಧ್ಯಾನಸ್ಥ ಮನಸ್ಸು ಬೇಕು.
ಹಾಗಾಗಿ ಕವನಗಳನ್ನು ಓದಲು ಒಂದು ಒಳ್ಳೆಯ ಮೂಡು ಅತ್ಯವಶ್ಯಕ. ಹಾಗೆಂದೇ ನಾನು ನನ್ನ ಸ್ನೇಹಿತರಿಗೆ ಆಗಾಗ ಹೇಳುತ್ತಿರುತ್ತೇನೆ; ಕವನ ಓದುವ ಮೊದಲು ನಿಮ್ಮ ಮೂಡನ್ನು ಸರಿಯಾಗಿಟ್ಟುಕೊಳ್ಳಿ ಎಂದು. ಈ “ಸರಿ ಮಾಡಿಕೊಂಡ ಮೂಡಿನಲ್ಲಿಯೇ” ನಾನು ಈತನ ಎಲ್ಲ ಕವನಗಳನ್ನು ಓದಿದ್ದು ಮತ್ತು ನೋಟ್ ಮಾಡಿಕೊಂಡಿದ್ದು.
ನಾನು ಲಿಬಿಯಾದಲ್ಲಿ ಇದ್ದಾಗಿನಿಂದಲೂ ಪ್ರವರನ ಕವನಗಳನ್ನು ಫೇಸ್ ಬುಕ್ ನಲ್ಲಿ ಓದುತ್ತಾ ಬಂದಿದ್ದೇನೆ ಮತ್ತು ಅವನ ಕವನಗಳಿಗೆ ಫಿದಾ ಆಗಿದ್ದೇನೆ. ಮುಂದೆ ಆತ ಅವನ್ನೆಲ್ಲ ಒಟ್ಟುಗೂಡಿಸಿ ಒಂದು ಕವನ ಸಂಕಲನವನ್ನು ಹೊರತಂದನು. ಅದು ಅವನಿಗೆ ’ಅಮ್ಮ’ ಪ್ರಶಸ್ತಿಯನ್ನು ಕೂಡ ತಂದುಕೊಟ್ಟಿತು. ಆಗ ನಾನವನಿಗೆ ಅಲ್ಲಿಂದಲೇ ಅಭಿನಂದನೆಗಳನ್ನು ಕಳಿಸಿದ್ದೆನು. ಮುಂದೆ ನಾನು ಅವಧಿಗೆ ಲಿಬಿಯಾದ ಬಗ್ಗೆ ಬರೆಯಲು ತೊಡಗಿದಾಗ ನನ್ನ ಒಂದೆರಡು ಲೇಖನಗಳನ್ನು ಓದಿ ಅವನು ಅದಕ್ಕೆ ಕಾಮೆಂಟಿಸಿದ್ದನ್ನು ಬಿಟ್ಟರೆ ನಮ್ಮಿಬ್ಬರ ಮಧ್ಯೆ ಅಂಥ ಪರಿಚಯವಾಗಲಿ, ಸಲಿಗೆಯಾಗಲಿ ಇರಲಿಲ್ಲ.
ಮುಂದೆ ನನ್ನ ಹೆಂಡತಿಗೆ ವರ್ಗವಾಗಿ ನಾವು ದಾವಣಗೆರೆಗೆ ಬರಬೇಕಾಯಿತು. ಅಲ್ಲಿ ನಾನು ಕೆಲಸಕ್ಕೆಂದು ಚಿತ್ರದುರ್ಗಕ್ಕೆ ಸೇರಿಕೊಂಡೆ. ಆತ ಹೊಸದುರ್ಗದ ನಿಜಲಿಂಗಪ್ಪ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದನೆಂದು ನನಗೆ ಗೊತ್ತಿತ್ತು. ಒಂದು ಸಾರಿ ನಾನು ನನ್ನ ವಿಭಾಗದ ಮುಖ್ಯಸ್ತರೊಂದಿಗೆ ಮಾತನಾಡುವಾಗ ಪ್ರವರನ ವಿಷಯ ಪ್ರಸ್ತಾಪವಾಯಿತು ಮತ್ತು ಅವನು ಅವರ ಸಹೋದ್ಯೋಗಿ ಆಗಿದ್ದನೆಂದು ಹೇಳಿದರು. ನನಗೆ ಖುಷಿಯಾಯಿತು. ಅವರ ಮೂಲಕ ಪ್ರವರನ ಪರಿಚಯವಾಗುತ್ತದಲ್ಲವೆಂದು. ಆಶ್ಚರ್ಯವೆಂಬಂತೆ ಇದಾಗಿ ಎರಡು ತಿಂಗಳಿಗೆ ಪ್ರವರ ನಮ್ಮ ಕಾಲೇಜಿನಲ್ಲಿ ಒಂದು ವರ್ಕ ಶಾಪ್ ಅಟೆಂಡ್ ಮಾಡಲು ಬಂದಿದ್ದ. ಅಲ್ಲಿ ಪ್ರವರನ ಪರಿಚಯವಾಯಿತು. ಅಲ್ಲಿಂದ ಮುಂದೆ ಫೋನುಗಳಲ್ಲಿ ನಮ್ಮ ಮಾತುಕತೆ ಮುಂದುವರಿಯಿತು.
ಸ್ವಭಾವತಃ ಪ್ರವರ ಮೆಲು ಮಾತಿನ (soft spoken) ಹುಡುಗ. ಬಹುಶಃ, ಅವನು ಅವನ ಕವನಗಳಲ್ಲಿ ಮಾತನಾಡುವಷ್ಟು ಹೊರಗಡೆ ಮಾತನಾಡುವುದಿಲ್ಲ ಎಂದು ಕಾಣುತ್ತದೆ. ಇದೇ ಕಾರಣಕ್ಕೆ ಅವನಿಂದ ಚೆಂದದ ಕವನಗಳನ್ನು ಬರೆಯಲು ಸಾಧ್ಯವಾಯಿತೇನೋ! William Wordsworth ಒಂದು ಕಡೆ ಹೇಳುತ್ತಾನೆ; Poetry is the spontaneous overflow of powerful feelings and it has its origin in emotions recollected in tranquility.” ಪದ್ಯದ ಕುರಿತ Wordsworth ನ ಈ ವ್ಯಾಖ್ಯಾನಕ್ಕೆ ಸರಿಹೊಂದುವಂತೆ ಇವೆ ಈತನ ಕವನಗಳು. “ಬಹುಪಾಲು ಕವಿತೆಗಳು ನನ್ನಿಂದ ಕೊರಳಪಟ್ಟಿ ಹಿಡಿದು ಬರೆಸಿಕೊಂಡಿವೆ. ಬರೆಯದೇ ಹೋದ್ರೆ ನಿನ್ನ ಕತ್ತು ಹಿಸುಕಿಬಿಡ್ತೇವೆ ಅಂತ ಧಮಕಿ ಹಾಕಿ ಬರೆಸಿಕೊಂಡ ಕವನಗಳ ಮೇಲೆ ಬೊಗಸೆ ಒಲವಿದೆ.” ಎಂದು ಕವಿಯೇ ಹೇಳುವ ತಮ್ಮ ಮಾತುಗಳಲ್ಲಿ ’spontaneous overflow of powerful feelings”ನ ಆಶಯ ಎದ್ದು ಕಾಣುತ್ತದೆ. ಒಂದು ಕವನ ಓದುಗರ ಮನಸ್ಸನ್ನು ತಟ್ಟಬೇಕು ಮತ್ತು ಮುಟ್ಟಬೇಕು. ಆ ಶಕ್ತಿ ಪ್ರವರನ ಎಲ್ಲ ಕವನಗಳಿಗೂ ಇದೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಆತನ ಒಂದೊಂದು ಸಾಲುಗಳು ಹೂ ಬಿರಿದ ಘಮಲಿನಂತೆ. ಉದಾಹರಣೆಗೆ ಈ ಕೆಳಗಿನ ಸಾಲುಗಳನ್ನೇ ಗಮನಿಸಿ;
ಸ್ನಾನದ ಕೋಣೆಯಿಂದ
ಒದ್ದೆ ಹೆಜ್ಜೆಗಳ ಅದೇ ತಾನೆ
ನೆಲಕ್ಕೆ ಜಾರಿಸಿದೆ
ಇಡಿ ಮನೆಯೆಲ್ಲಾ
ಹೂ ಬಿರಿದ ಘಮಲು
ಮುಂದುವರಿದು ಕವಿ ಹೇಳುತ್ತಾನೆ;
ಕೂದಲು ಕೊಡವಿ
ಹನಿ ಬೀಳುವಾಗೆಲ್ಲಾ
ರಾತ್ರಿ ಕತ್ತಲಿಂದುದುರಿದ
ನಕ್ಶತ್ರಗಳದ್ದೇ ನೆನಪು
ಅಬ್ಬಾ! ಎಷ್ಟೊಂದು ಸುಮ್ದರ! ಇಂಥ ಸಾಲುಗಳಿಗೆ ಮರಳಾಗದವರು ಯಾರಿದ್ದಾರೆ ಹೇಳಿ?
ಈತನ ಇನ್ನೊಂದು ಕವನ ನೋಡಿ;
ಬೆಳದಿಂಗಳಲ್ಲಿ ತೊಯ್ದ ಹುಡುಗಿ
ರಾತ್ರಿಯೆಲ್ಲಾ ಅಲೆಯುತ್ತಿದ್ದಾಳೆ
ಗುಲಾಬಿ ತೋಟದ ಹಾಡು ಗುನುಗಿಕೊಂಡು
ಬೆರಳ ತುದಿಗೆ ಚಿಟ್ಟೆಗಳ ಕೂರಿಸಿಕೊಂಡುಂತಿದೆ
ಕಾಮ ಬಳ್ಳಿಯ ಹೊಕ್ಕುಳದ ತುಂಬೆಲ್ಲಾ ಹಬ್ಬಿಸಿಕೊಂಡು
ಯುದ್ಧೋನ್ಮಾದ ಕೆಡವಿದ ಪಾರಿವಾಳಗಳ ಜೊತೆಯಲ್ಲಿ
ಈ ಸಾಲುಗಳು ಲಯಬದ್ಧವಾಗಿ ಸಾಗುತ್ತಾ ಓದುಗುರ ಮನಸ್ಸನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗುತ್ತವೆ. ಕಾವ್ಯಕ್ಕೆ ಇರಬೇಕಾದ ಮುಖ್ಯ ಗುಣ ಲಯಬದ್ಧತೆ. ಇದನ್ನು ಪ್ರವರ ಸಮರ್ಥವಾಗಿ ನಿಭಾಯಿಸುತ್ತಾ ಬಂದಿದ್ದಾನೆ.
ಪ್ರವರನ ಕವನಗಳಲ್ಲಿ ’ಕಾಮ’ ಢಾಳಾಗಿ ಕಾಣಿಸಿದರೂ ಅವನು ಅದನ್ನೆಲ್ಲೂ ಅಶ್ಲೀಲಗೊಳಿಸದೆ ಅದಕ್ಕೊಂದು ಸೌಂದರ್ಯಪ್ರಜ್ಞೆಯ ಸ್ಪರ್ಶವನ್ನು ಕೊಡುತ್ತಾನೆ.
ಈ ಕೆಳಗಿನ ಸಾಲುಗಳನ್ನು ಗಮನಿಸಿ; ಇಲ್ಲಿ ಕವಿ ಕಾಮಕ್ಕೆ ಒಂದು ವಿಭಿನ್ನವಾದ ಸ್ಪರ್ಶವನ್ನು ಕೊಡುವದರ ಮೂಲಕ ತಾನೂ ಅದನ್ನು ಆಸ್ವಾದಿಸುತ್ತಾ ಆ ಆಸ್ವಾದನೆಯಲ್ಲಿ ನಮ್ಮನ್ನೂ ಹೇಗೆ ಎಳೆದುಕೊಳ್ಳುತ್ತಾರೆಂದು.
ಬೆರಳ ತುದಿಗೆ ಝೋಂಪು ಹಿಡಿದು ಬೆನ್ನು ಸವರುವಾಗ
ಆಯಾತಪ್ಪಿದ ಬೆಕ್ಕಿನ ಉಸಿರಿಗೆ
ರಾತ್ರಿ ಹೆಕ್ಕಿದ
ಚುಕ್ಕೆಯೊಂದನ್ನು ಅಂಟಿಸುತ್ತಾಳೆ
ಹಗುರ ಮೈಮುರಿದು ದುಪ್ಪಟ್ಟು ರೋಮಾಂಚನ,
ಸ್ಖಲಿಸಲಾಗದ ಸುಖ
ತುಂಬು ಸ್ತನಗಳ ಅಂಗಳಕ್ಕೆ ಬೆರಳ ಮೊಹರುಗಳನ್ನು
ಹಚ್ಚೆ ಉಣಿಸಿದಂತೆಲ್ಲಾ ಹಾಸಿಗೆಯ ಸುಕ್ಕುಗಳ ಸಂಖ್ಯೆ ಏರತ್ತದೆ
ಎದೆ ಇರಿವ ಚೂರಿಗೆ ಅಂಗಲಾಚುತ್ತಾಳೆ,
ಸಂತೆ ಅಲೆದು ಖಾಲಿ ಜೋಳಿಗೆ
ಬೆನ್ನು ಕೊಟ್ಟು ಪದ್ಯ ಬರೆವಂತೆ ಪೀಡಿಸುತ್ತಾಳೆ
ನಾಲ್ಕು ಗೀರು ಹೆಚ್ಚೇ ಇರಲೆಂಬ ಸೊಕ್ಕು ನನಗೆ
ಕಾಮದ ಧ್ಯಾನಸ್ಥ ಮನಸ್ಸಿದ್ದವರಿಗೆ ಮಾತ್ರ ಇಂಥ ಪದ್ಯಗಳನ್ನು ಬರೆಯಲು ಸಾಧ್ಯ.
ಇನ್ನೊಂದು ಪದ್ಯದ ಸಾಲುಗಳನ್ನು ನೋಡಿ;
ಕತ್ತಲಿಗೆ ಬೆತ್ತಲಿಗೆ
ಕಾಮಕ್ಕೆ ಧ್ಯಾನಕ್ಕೆ
ಹಾಸಿಗೆಗೆ ಹಾದರಕ್ಕೆ
ಹುಟ್ಟುವ ಪದ್ಯ
ಇಂಥ ಸಾಲುಗಳಲ್ಲಿ ಕವಿ ನಮ್ಮನ್ನು ಮುಳಿಗೇಳಿಸುವದಲ್ಲದೆ ಕಾಮದ ಪರಿಧಿಯಲ್ಲಿ ಪದ್ಯ ಹುಟ್ಟುವ ವಿಶಿಷ್ಟ ಅನುಭೂತಿಯೊಂದನ್ನು ಕಟ್ಟಿಕೊಡುತ್ತಾನೆ.
ತಮ್ಮ ಇನ್ನೊಂದು ಕವನದಲ್ಲಿ
“ಧೋ ಎಂದು ಮಳೆ
ನೆನೆದು ಮೈ ಒದ್ದೆಯಾದಾಗ ಹಾಳು ಹೃದಯ
ಬೆಚ್ಚಗಿರಲು ಹಾತೊರೆಯುತ್ತದ”
ಎಂದು ಹೇಳುತ್ತಲೇ ಪ್ರವರ ತಮ್ಮ ಕವನಗಳ ಮಳೆಯಲ್ಲಿ ನಮ್ಮನ್ನೆಲ್ಲಾ ತೋಯಿಸುತ್ತಾ ಮತ್ತೆ ನಮ್ಮನ್ನು ಬೆಚ್ಚಗಾಗಿಸುವದು ಹೀಗೆ;
ಮೊಲೆ ತೊಟ್ಟಿನಲ್ಲಿ ಹಚ್ಚೆ ಹೊಯ್ದ ಹಲ್ಲು
ಕುತ್ತಿಗೆಯಲ್ಲಿ ಕಪ್ಪುಗಟ್ಟಿದ ಗುರುತು,
ಕುಲುಮೆಯಲ್ಲಿ ಕಾಯಿಸಿದಂಥಾ ತುಟಿ
ಮೆತ್ತನೆಯ ಎದೆ ತುಂಬಾ ಬೆರಳ ಮುದ್ರೆ
ಮಳೆಗೆ ಕುಣಿದ ನವಿಲಿನ ಅಂಗಾಲಿನ ತುಂಬಾ ನೋವ ಸುಖ
ನಾನು ಈ ಮುಂಚೆ ಹೇಳಿದಂತೆ ಪ್ರವರನ ಸಾಲುಗಳು ಲಯಬದ್ಧವಾಗಿ ಹೆಜ್ಜೆಹಾಕುತ್ತಾ ಸಾಗುತ್ತವೆ. ಈ ಕೆಳಗಿನ ಸಾಲುಗಳನ್ನು ಗಮನಿಸುವದಾದರೆ ಇಲ್ಲಿ ಕವಿ ಮಾತನಾಡುವದಿಲ್ಲ. ಬದಲಿಗೆ ಅದೃಶ್ಯವಾಗಿ ಲಯಬದ್ಧವಾಗಿ ಹಾಡುತ್ತಾ ಹೋಗುತ್ತಾನೆ.
ದೀಪ ಹಚ್ಚುವ ಸಂಜೆ
ಆಕೆ ಥಂಡಿ ಗಾಳಿಯಂತೆ ಮೈ ಮುರಿಯುತ್ತಾಳೆ,
ಗಾಜಿನ ಬಳೆ
ಪರಿಮಳದಷ್ಟೇ ಸಲೀಸಾಗಿ ಸದ್ದು
ಉರುಳಿಸುತ್ತದೆ,
ಹಸಿರ ಬಣ್ಣದ ನಡುವೆ, ಚಿನ್ನದ ಚುಕ್ಕೆ
ಜಾತ್ರೆಯ ಗದ್ದಲದ ನಡುವೆ
ಕೊಂಡದ್ದು
ಇಂಥ ಅನೇಕ ಸಾಲುಗಳು ಸಂಕಲನದಲ್ಲಿ ನಮಗೆ ಕಾಣಸಿಗುತ್ತವೆ. ಪ್ರವರನಿಗೆ ಕವನ ಕಟ್ಟುವ ಕಲೆ ಚನ್ನಾಗಿ ಒಲಿದಿದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಒಮ್ಮೊಮ್ಮೆ ಅವ ಪ್ರಥಮ ಪುರುಷದ ನಿರೂಪಣೆಯಿಂದ ಇದ್ದಕ್ಕಿದ್ದಂತೆ ದ್ವಿತಿಯ ಪುರುಷದ ನಿರೂಪಣೆಗೋ ಇಲ್ಲವೇ ತೃತಿಯ ಪುರುಷದ ನಿರೂಪಣೆಗೋ ಜಿಗಿದು ಓದುಗರನ್ನು ಕೊಂಚ ಗೊಂದಲಕ್ಕೆ ತಳ್ಳುವದುಂಟು. ಬಿಟ್ಟರೆ ಈತನ ಕಾವ್ಯ ಶಕ್ತಿಗೆ ಹಾಗೂ ಕಾವ್ಯ ಕಲೆಗೆ ನಿಬ್ಬೆರೆಗಾಗದವರು ಯಾರಿದ್ದಾರೆ ಹೇಳಿ?
ಪ್ರವರ ನಮಗೆ ಇಷ್ಟವಾಗೋದು ಬಳಸಿದ್ದನ್ನೇ ಬಳಸದೇ ಇರುವಂಥ ಸಾಲುಗಳಿಗಾಗಿ. ಪ್ರತಿಯೊಂದು ಸಾಲು ಏನೋ ಒಂದು ಹೊಸತನವನ್ನು ಹೇಳುವಂತಿರುತ್ತದೆ.
ಹೊಕ್ಕಳಿನಂಚಿಗೆ ಮುಲುಕಾಟದ ಎಂಜಲು
ಎಷ್ಟು ತಿಕ್ಕಿದರೂ ಹೋಗುತ್ತಿಲ್ಲ
ಮುಖದ ಮೇಲೆ ಸಣ್ಣಗಿನ ಗಾಳಿಯಂಥಾ ಕಸಿವಿಸಿ
ಇನ್ನೊಂದು ಕಾರಣಕ್ಕಾಗಿ ಅವನು ನನಗೆ ವೈಯಕ್ತಿಕವಾಗಿ ಇಷ್ಟವಾಗುತ್ತಾನೆ. ಅದೇನೆಂದರೆ ಸಾಮಾನ್ಯವಾದುದನ್ನೇ ವಿಶೇಷ ರೀತಿಯಲ್ಲಿ ಪರ್ಯಾಯ ಪದವೆನಿಸುವ ಪದಗಳಲ್ಲಿ ಹೇಳುತ್ತಾನೆ. ಉದಾಹರಣೆಗೆ ಮೊನ್ನೆ ನಾನು ಅವನ ಒಂದು ಕವನವನ್ನು ಇಂಗ್ಲೀಷಿಗೆ ಅನುವಾದಿಸುವಾಗ ಅದರಲ್ಲಿ “ವಾಚಾಳಿ ಬೆವರು” ಎಂದು ಕಾಣಿಸಿತು. ನಮಗೆಲ್ಲಾ ವಾಚಾಳಿ ಎಂದರೆ ಗೊತ್ತು. ವಾಚಾಳಿತನ ಎಂದರೆ ಗೊತ್ತು. ಇದ್ಯಾವುದಿದು “ವಾಚಾಳಿ ಬೆವರು” ಹೊಸದಾಗಿದೆಯಲ್ಲ? ಎಂದು ಬಹಳಷ್ಟು ತಲೆಕೆಡಿಸಿಕೊಂಡೆ. ಅದನ್ನು ಅನುವಾದ ಮಾಡುವದು ಹೇಗೆಂದು ಗೊತ್ತಾಗದೆ ತಕ್ಷಣ ಅವನಿಗೆ ಫೋನ್ ಮಾಡಿ “ಈ ಶಬ್ದವನ್ನು ಯಾವ ಅರ್ಥದಲ್ಲಿ ಬಳಸಿರುವಿ?” ಎಂದು ಕೇಳಿದೆ. ಆಗ ಅವನು “ಅವ್ಯಾವಹಿತ ಅಥವಾ ಬಹಳಷ್ಟು” ಎನ್ನುವ ಅರ್ಥದಲ್ಲಿ ಬಳಸಿದ್ದೇನೆ ಎಂದು ಹೇಳಿದಾಗ ನನಗೆ ನಿಜಕ್ಕೂ ‘ಓ, ಈ ಪದವನ್ನು ಹೀಗೂ ಬಳಸಬಹುದೆ? ಎಂದು ಅಚ್ಚರಿಯಾಯಿತು. ಇಂಥ ಅಚ್ಚರಿಗಳಿಂದಲೇ ಪ್ರವರ ನಮಗೆ ಹತ್ತಿರವಾಗುತ್ತಾನೆ ಮತ್ತು ಆ ಮೂಲಕ ಒಮ್ಮೊಮ್ಮೆ ನಮ್ಮ ಕಿವಿಯಲ್ಲಿ ಪಿಸುಗುಡುತ್ತಾನೆ, ಒಮ್ಮೊಮ್ಮೆ ಝೇಂಕರಿಸುತ್ತಾನೆ, ಒಮ್ಮೊಮ್ಮೆ ನಮ್ಮ ಹೃದಯದ ಹಾಡಾಗಿ ಹಾಡುತ್ತಾನೆ, ಒಮ್ಮೊಮ್ಮೆ ನಮ್ಮ ಮೈ ಬೆಚ್ಚಗಾಗಿಸುತ್ತಾ ಸ್ಖಲಿಸಿಯೂ ಬಿಡುತ್ತಾನೆ.
ಪ್ರವರನ ಕಾವ್ಯದ ಘಮಲನ್ನು ನೀವು ಅನುಭವಿಸಬೇಕೆಂದರೆ “ಒಂದು ಮುತ್ತಿನಿಂದ ಕೊಲ್ಲಬಹುದು” ಎನ್ನುವ ಈತನ ಆಕರ್ಷಕ ತಲೆಬರಹವಿರುವ ಕವನ ಸಂಕಲನವನ್ನು ಒಮ್ಮೆ ಕೊಂಡು ಓದಿ. ಏಕೆಂದರೆ ಇಲ್ಲಿ ಪ್ರೇಮವಿದೆ, ಕಾಮವಿದೆ, ಪ್ರಣಯವಿದೆ, ಜೊತೆಗೆ ಒಂದಿಷ್ಟು ವಿರಹವಿದೆ. ನಮ್ಮ ಹದಿಹರೆಯದ ನೆನಪಿಗಾಗಿ ಕಾಪಿಟ್ಟುಕೊಳ್ಳುವಂಥ ಕವಿತೆಗಳು ಇದರಲ್ಲಿವೆ. ಈ ಪುಸ್ತಕ ಕೊಂಡಿದ್ದಕ್ಕೆ ಖಂಡಿತ ನಿಮಗೆ ಮೋಸವಾಗಲಾರದು. ಇಂಥ ಕವಿತೆಗಳನ್ನು ಕೊಟ್ಟಿದ್ದಕ್ಕೆ ಪ್ರವರನನ್ನು ಅಭಿನಂದಿಸುತ್ತಾ ಅವನಿಂದ ಮತ್ತಷ್ಟು ಕೃತಿಗಳು ಮುಂದಿನ ದಿನಗಳಲ್ಲಿ ಮೂಡಿಬರಲಿ ಎಂದು ಹಾರೈಸುತ್ತೇನೆ.
ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ