ಪ್ರೇಮ ಕುರುಡು, ಸಂಗಾತಿಯ ಆಯ್ಕೆ ಗಂಡು/ಹೆಣ್ಣಿನ ಹಕ್ಕು, ಆಸ್ತಿ-ಅಧಿಕಾರ-ಅಂತಸ್ತು...ಇಂತಹ ಸಾಮಾನ್ಯ ಅಭಿಪ್ರಾಯಗಳನ್ನೂ ಮೀರಿ, ತನಗಿಂತಲೂ 15 ವರ್ಷ ಹಿರಿಯಳಾದ ವಿಧವೆಯನ್ನೇ ಮದುವೆಯಾಗುವ ಕಥಾನಾಯಕ ತರುಣನ ನಿರ್ಧಾರದ ಹಿಂದೆ ಮನೋವೈಜ್ಞಾನಿಕ ತರ್ಕ ಏನಿರಬಹುದು...?
ಆಕೆ ವಿಧವೆ. ಎರಡು ಮಕ್ಕಳ ತಾಯಿ, ಖ್ಯಾತ ಅರ್ಥಶಾಸ್ತ್ರಜ್ಞೆ
ಕಥಾನಾಯಕ ತರುಣನಿಗೆ 27ರ ಹರೆಯ.ಸಂಶೋಧನಾ ವಿದ್ಯಾರ್ಥಿ
‘ನಿನಗಿಂತ ಸ್ವಲ್ಪ ಕಿರಿಯಳಾದ ಯುವತಿಯೊಂದಿಗೆ ಮದುವೆ ಮಾಡಿಕೊಂಡಿರು’ ಎಂಬ ತಾಯಿಯ ಸಲಹೆಗೆ ಅಸಮ್ಮತಿ.
ಮದುವೆ ಬೇಡ ಎಂದರೆ ಖಂಡಿತವಾಗಿಯೂ ನಡೆಯಲ್ಲ ಎಂಬುದು ತಾಯಿಗೆ ಮಗನ ವಾಗ್ದಾನ.
ಮದುವೆಯಾದರೆ ಆ ವಿಧವೆಯನ್ನೇ ಎಂಬ ಹಠ ಬೇರೆ.
-ಇವಿಷ್ಟು ವಸ್ತುವನ್ನಿಟ್ಟುಕೊಂಡು, ಸತೀಶ ಚಪ್ಪರಿಕೆ ಅವರ ‘ವರ್ಜಿನ್ ಮೋಹಿತೋ’ ಕಥಾ ಸಂಕಲನದ ‘ಹೈಡ್ ಪಾರ್ಕ್’ ಕಥೆಯ ನಾಯಕ `ಚಿರಂತನ್’ ಪಾತ್ರವನ್ನು ವಿಶ್ಲೇಷಿಸಿದೆ.
ಕಥೆಯ ಹಿನ್ನೆಲೆ: ತಾಯಿ ವಂದನಾ ವಿಚ್ಛೇದಿತ ಮಹಿಳೆ. 7 ವರ್ಷದ ಮಗ ಚಿರಂತನ. ‘ಬಾಯ್ ಫ್ರೆಂಡ್ ಇದ್ದರೆ ತಪ್ಪಿಲ್ಲ’ ಎನ್ನುವ ಸಹೋದ್ಯೋಗಿಯೊಬ್ಬಳ ಸಲಹೆ ವಂದನಾಗೆ ಕಾಡುತ್ತಿತ್ತು. ಮಗನ ಭವಿಷ್ಯಕ್ಕಾಗಿ ಆ ಸಲಹೆ ರೂಪದ ಬೇತಾಳನನ್ನು ಪ್ರಜ್ಞಾಪೂರ್ವಕವಾಗಿ ಹತ್ತಿಕ್ಕುತ್ತಲೇ ಬಂದಿದ್ದಳು. ಮಗನ ಮುಂದೆಯೇ (ಆತ ಮಗುವೆಂದು ನಿರ್ಲಕ್ಷಿಸಿ) ಇಂತಹ ಸಲಹೆಗಳ ಪ್ರಸ್ತಾಪವಾಗುತ್ತಿತ್ತು. ಮನಸ್ಸು ಬಿರುಗಾಳಿಗೆ ಸಿಕ್ಕಿದಂತಾಗುವ ವಂದನಾ, ಒಂದು ದಿನದ ಆ ರಾತ್ರಿ ಚಿರುಗೆ ಬರೀ ಹಾಲು ಕುಡಿಯಲು ಕೊಟ್ಟು ಮಲಗಿಸುತ್ತಾಳೆ. ಮಗನಿಗೆ ಒಬ್ಬ ತಂದೆ ತಂದುಕೊಳ್ಳಲಾಗದ ಸ್ಥಿತಿಯಲ್ಲಿ ತಾಯಿ ವಂದನಾ, ಒಬ್ಬ ತಂದೆ ಇರದ ಅನಾಥಪ್ರಜ್ಞೆಯಲ್ಲಿ ಈ ಬಾಲಕ. ಬಾಲ್ಯದ ಇಂತಹ ನೆನಪುಗಳು ಆತನ ಭವಿಷ್ಯದ ವರ್ತನೆಗಳ ವೃಕ್ಷಕ್ಕೆ ಮೂಲ ಬೇರುಗಳಾಗಿವೆ ಎಂಬುದನ್ನು ಗುರುತಿಸಬಹುದು.
ಜೆರಾಂಟೊಫಿಲಿಯಾ…! ತನಗಿಂತ ವಯಸ್ಸಿನಲ್ಲಿ ಹಿರಿಯಳಾಗಿದ್ದರೂ ಮದುವೆಯಾಗ ಬಯಸುವ ಮನಸ್ಥಿತಿಗೆ ಜೆರಾಂಟೊಫಿಲಿಯಾ ಎನ್ನುತ್ತಾರೆ. ಇಂತಹ ನಿರ್ಧಾರ ತೀರಾ ಖಾಸಗಿ ಇಲ್ಲವೇ ಪ್ರೇಮ -ಆದರ್ಶದ ಮುಖವೂ ಆಗಿರಬಹುದು. ತ್ಯಾಗ ಎಂಬ ಸಂತೃಪ್ತಿಯ ಇಲ್ಲವೇ ಎಲ್ಲಕ್ಕಿಂತ ಹೆಚ್ಚಾಗಿ, ಸಂಗಾತಿಯ ಆಯ್ಕೆ ಹಕ್ಕು ತನಗೆ ಸೇರಿದ್ದು ಎಂಬ ಭಾವವೂ ಇರಬಹುದು. ಯುವಕ ಮಾತ್ರ ತನಗಿಂತ ಹಿರಿಯ ವಯಸ್ಸಿನ ಹೆಣ್ಣು-ವಿಧವೆ-ವಿಚ್ಛೇದಿತ-ನಿರ್ಗತಿಕ ಮಹಿಳೆಯನ್ನು ಮದುವೆಯಾಗುವುದು. ಸಮಾಜಕ್ಕೆ ಉತ್ತರ ನೀಡಲು ಆ ವ್ಯಕ್ತಿ ರಕ್ಷಣಾತ್ಮಕ ತಂತ್ರಗಳನ್ನು ಆಯುಧವಾಗಿ ಬಳಸುತ್ತಾನೆ.
ಸಬ್ಲಿಮೇಶನ್- ರಕ್ಷಣಾತ್ಮಕ ತಂತ್ರ: ವ್ಯಕ್ತಿಗತ ಜೀವನದಲ್ಲಿ ಈಡೇರಿಸಿಕೊಳ್ಳಲಾರದ ಆಕಾಂಕ್ಷೆಗಳು, ಹಂಬಲಗಳು, ಆಸೆಗಳು ಇತ್ಯಾದಿ ಸಾಮಾಜಿಕವಾಗಿ ಒಪ್ಪಿಗೆಯಾಗುವಂತೆ ಅವುಗಳನ್ನು ಪರಿವರ್ತಿಸಿಕೊಂಡು ಅಥವಾ ರೂಪಾಂತರಿಸಿಕೊಂಡು ಅನುಭವಿಸುವುದು ಸಬ್ಲಿಮೇಶನ್ ರಕ್ಷಣಾ ತಂತ್ರವಾಗಿದೆ.
ಫ್ರಾಯ್ಡನ ಪ್ರಕಾರ, ಸಬ್ಲಿಮೇಶನ್ ರಕ್ಷಣಾ ತಂತ್ರವು ನಾಗರಿಕ ಸಮಾಜದ ಅತ್ಯಂತ ಗೌರವಾನ್ವಿತ ತಂತ್ರ. ಇದು ಮನುಷ್ಯನ ಪ್ರಬುದ್ಧತೆಯ ಸೂಚಕ ಹಾಗೂ ಸಮಾಜ ಒಪ್ಪಿಗೆಯ ಸಂಕೇತ. ದೈಹಿಕವಾಗಿ ಆರೋಗ್ಯಕರವೂ, ಮಾನಸಿಕವಾಗಿ ಸೃಜನಾತ್ಮಕವೂ ಆಗಿರುತ್ತದೆ ಎಂಬುದು.
ತಂದೆಯ ಅಪ್ಪುಗೆಯಿಂದ ವಂಚಿತಳಾದ ತಾಯಿಯ ಮನಸ್ಥಿತಿಯನ್ನು (ವಿಶೇಷವಾಗಿ ಲೈಂಗಿಕ ತೃಷೆ) ಗ್ರಹಿಸದಷ್ಟು ಬಾಲಕನಲ್ಲ ಮಗ ಚಿರಂತನ್. ‘ವಿಚ್ಛೇದಿತ ತಾಯಿಯ ಮಗ’ ಎಂಬ ಅವಮಾನ-ಹಿಂಸೆ ತನಗೆ. ಇಂತಹ ಸ್ಥಿತಿ ಯಾರಿಗೂ ಬೇಡ. ಸಾಧ್ಯವಾದರೆ, ಅಂತಹ ಮಕ್ಕಳಿಗೆ ನೈತಿಕ ಬೆಂಬಲ ನೀಡುವುದು. ಮತ್ತೂ ಸಾಧ್ಯವಾದರೆ, ವಿಧವೆ ಅಥವಾ ವಿಚ್ಛೇದಿತಳನ್ನೇ ಮದುವೆಯಾಗುವ ಮೂಲಕ ಆಕೆಯ ಬದುಕಿನಲ್ಲಿ ತಾನೊಂದು ತಂಗಾಳಿಯಾಗಿ ಸುಳಿಯುವುದಾದರೆ ಬದುಕು ಸಾರ್ಥಕ ಎಂದೆಣಿಸಬಹುದು.
ಈ ಕಥೆಯಲ್ಲಿ, 42ರ ವಿಧವೆ ಜ್ಯೂಲಿಯಾಗೆ ಪತಿಯಾಗಿ ಮತ್ತು ಅವಳ ಇಬ್ಬರು ಮಕ್ಕಳಿಗೆ ತಂದೆಯಾಗುವುದು…. ಹೀಗೆ ಬದುಕಿನ ಭಾಗವಾಗಿ ತನ್ನನ್ನೇ ಸಮರ್ಪಿಸಿಕೊಳ್ಳುವ ಈ ನಿರ್ಧಾರ ಆತನಿಗೆ ಸಂತೃಪ್ತಿ ನೀಡುತ್ತದೆ. ಇದನ್ನು ಸ್ವತಃ ತಾಯಿಯೂ ಸಹ ಒಪ್ಪಲಿಕ್ಕಿಲ್ಲ. ಆದರೆ, ತನ್ನಂತೆ ನೋವು ಅನುಭವಿಸುವ ಒಂದು ಹೆಣ್ಣಿನ ನೋವನ್ನು ತಿಳಿಯಲಾರದಷ್ಟು ಯಾವ ತಾಯಿಯೂ ಮೂರ್ಖಳಾಗಿರುವುದಿಲ್ಲ. ಆ ಕಾರಣಕ್ಕೆ, ವಯಸ್ಸಿನಲ್ಲಿ ಹಿರಿಯಳಾದರೂ ಆ ವಿಧವೆಯ ಮದುವೆಯನ್ನು ತಡೆಯುವುದಿಲ್ಲ. ಆದ್ದರಿಂದ, ತಾಯಿ ವಂದನಾ, ಲಂಡನ್ ನಿಂದ ಭಾರತಕ್ಕೆ ಮರಳುವಾಗ-ಜ್ಯೂಲಿಯಾ -ಚಿರಂತನ್, ಇಬ್ಬರ ಕೈಗಳನ್ನು ಅದುಮಿ ಹಿಡಿದು, ‘ನಾನೇ ಮಧ್ಯೆ ಬಂದರೂ ನೀವು ಕೈ ಬಿಡಬೇಡಿ, ಬೇಗ ಮದುವೆ ಮಾಡಿಕೊಳ್ಳಿ. ಈ ಇಬ್ಬರು ಮೊಮ್ಮಕ್ಕಳೊಂದಿಗೆ ಮಗ-ಜ್ಯೂಲಿಯಾ, ಪುಣೆಯ ಮನೆಗೆ ಬಂದರೆ ಸ್ವಾಗತಿಸುತ್ತೇನೆ’ ಎಂದು ಹೇಳಿ ಹೊರಡುತ್ತಾಳೆ.
ಪ್ರೇಮ ಕೊಡವಿಕೊಳ್ಳಲಾಗದು: ‘ಕೇವಲ ಕಾಮವಾಗಿದ್ದರೆ ಅದನ್ನು ಸುಲಭವಾಗಿ ಕೊಡವಿಕೊಳ್ಳಬಹುದು. ಆದರೆ, ಪ್ರೇಮವನ್ನೇ ಜೀವಿಸುವವರಿಗೆ ಸುಲಭವಾಗಿ ಕೊಡವಿಕೊಳ್ಳಲಾಗದು’ ಎಂಬ ಕಥೆಯ ಆರಂಭದ ಸಾಲುಗಳಿಂದ ಚಿರಂತನ್-ಜ್ಯೂಲಿಯಾ ಮಧ್ಯೆ ಗಾಢ ಮತ್ತು ನೈಜ ಪ್ರೇಮವಿತ್ತು ಎಂದು ಅರ್ಥೈಸಬೇಕಿಲ್ಲ. ಬದಲಾಗಿ, ತನ್ನ ತಾಯಿಯ ನೋವು ಮತ್ತು ತಂದೆ ಇರದ ಆತನ ಅನಾಥಪ್ರಜ್ಞೆ-ಈ ಕಾಡುವ ಅಭಾವವನ್ನು ತನ್ನ ಮಿತಿಯೊಳಗೆ ತುಂಬಲು, ಆತನ ಮನಸ್ಸು ಹಾತೊರೆಯುತ್ತದೆ. ‘ಜ್ಯೂಲಿಯಾ-ಆಕೆಯ ಮಕ್ಕಳ ಮನಸ್ಸಿಗಾದರೂ ತನ್ನಿಂದ ನೆಮ್ಮದಿ ದೊರಕೀತು’ ಎಂಬ ಭಾವ ಇಲ್ಲಿ ಸಂತೃಪ್ತಗೊಳ್ಳುವುದನ್ನು ಕಾಣಬಹುದು.
‘ಒಂದೇ ದಿನ ಒಂದೇ ಕ್ಷಣದಲ್ಲಿ ನಾವು ಈ ಆತುರದ ನಿರ್ಧಾರ ಕೈಗೊಂಡಿಲ್ಲ’ ಎನ್ನುತ್ತಾನೆ. ಆಕೆಯ ವಯಸ್ಸು, ಆಕೆ ವಿಧವೆ, ಆಕೆಯ ಅಂತಸ್ತು-ಅಧಿಕಾರ-ಹಣ-ಅರ್ಥಶಾಸ್ತ್ರಜ್ಞೆ ಎಂಬ ಖ್ಯಾತಿ...ಹೀಗೆ ಇವು ಯಾವುವೂ ಈ ನಿರ್ಧಾರದ ಹಿಂದಿಲ್ಲ. ಅಂದರೆ, ನಮ್ಮ ಅರಿವಿಗೆ ಬಾರದಂತೆ ಬಾಲ್ಯದ ನೆನಪುಗಳು ಇಂತಹ ನಿರ್ಧಾರದ ಮೂಲಕ ಹೇಗೆ ನಮ್ಮ (ಇಲ್ಲಿ ಚಿರಂತನ್) ಭವಿಷ್ಯವನ್ನು ರೂಪಿಸಲು ಪ್ರೇರೇಪಿಸುತ್ತವೆ ಎಂಬುದನ್ನು ತಿಳಿಯಲು ಸಾಧ್ಯವಿದೆ. ಆತನ ಪ್ರೌಢಿಮೆ ಇರುವುದು ; ‘ಜ್ಯೂಲಿಯಾಳ ಹೊರತು ಯಾರನ್ನೂ ಮದುವೆಯಾಗಲಾರೆ’ ಎನ್ನುವುದರಲ್ಲಿ ಮತ್ತು ‘ಬೇಡ ಎಂದರೆ ಮದುವೆ ನಡೆಯದು’ ಎಂಬ ವಾಗ್ದಾನ ನೀಡುವಲ್ಲಿ. ತನ್ನ ಮೇಲಿನ ತಾಯಿಯ ಹಕ್ಕು-ಪ್ರಭುತ್ವವನ್ನು ಆತ ಗೌರವಿಸುತ್ತಾನೆ. ‘ವಂದನಾ ಒಪ್ಪಿದರೆ ಮಾತ್ರ ಮದುವೆ’ ಎಂಬ ಜ್ಯೂಲಿಯಾಳ ಮಾತು ಸಹ ಚಿರುವಿನ ನಿರ್ಧಾರಕ್ಕೆ ಒಂದು ಸುಂದರ ಹಾಗೂ ಭದ್ರವಾದ ಚೌಕಟ್ಟು ಒದಗಿಸುತ್ತದೆ. ತನಗಿಂತ ಹಿರಿಯಳನ್ನು ಮದುವೆಯಾಗುವುದು...ತಾಯಿಯ ಮಾತನ್ನೂ ನಿರ್ಲಕ್ಷಿಸುವುದು, ಮದುವೆ ಒಂದು ಸಾಮಾಜಿಕ-ಸಾಂಸ್ಕೃತಿಕ ಒಪ್ಪಂದ ಎನ್ನುವುದು...ಇಂತಹ ಮಾನದಂಡಗಳು ಮೇಲ್ನೋಟಕ್ಕೆ
ಚಿರುವಿನ ವ್ಯಕ್ತಿತ್ವವನ್ನು ಘಾಸಿ ಮಾಡುತ್ತವೆ. ಆದರೆ, ಚಿರು ಬೆಳೆದ ಬಗೆ, ತಾಯಿ ವಂದನಾಳ ಹಿನ್ನೆಲೆ, ತಾಯಿ-ಮಗನ ಮಧ್ಯೆ ಇರುವ ಮುಕ್ತ (ವಿಶೇಷವಾಗಿ ಲೈಂಗಿಕತೆ ಕುರಿತು) ಮಾತುಕತೆ, ಮನಸ್ಸು ಎಳೆದತ್ತ ಹೋಗದ ವಂದನಾಳ ವ್ಯಕ್ತಿತ್ವ ಹಾಗೂ ಸಾಂಸ್ಕೃತಿಕ ಬದುಕು ...ಎಲ್ಲವನ್ನು ವಿಶ್ಲೇಷಣೆಗೆ ಒಳಪಡಿಸಿದರೆ, ಚಿರು ಕೈಗೊಳ್ಳುವ ನಿರ್ಧಾರದ ಹಿಂದಿನ ಊಹಾತೀತ ಘನತೆ-ಗೌರವ-ನಿಸ್ವಾರ್ಥ ಬದುಕಿನ ಮನೋಸೂಕ್ಷ್ಮತೆಗಳು ಧ್ವನಿಸುತ್ತವೆ. ಜೊತೆಗೆ, ಈ ನಿರ್ಧಾರದ ನಿಗೂಢತೆಯನ್ನು ಕಾಯ್ದುಕೊಳ್ಳುತ್ತಾ ಬರುವ ಶೈಲಿಯು, ಕಥಾ ಹಂದರದ ಗಟ್ಟಿತನ ಹಾಗೂ ಅರ್ಥಪೂರ್ಣವಾದ ಪರಿಣಾಮಕತೆಗೆ ಕನ್ನಡಿ ಹಿಡಿಯುತ್ತದೆ.