ಪ್ರೇಮ ಕುರುಡು, ಸಂಗಾತಿಯ ಆಯ್ಕೆ ಗಂಡು/ಹೆಣ್ಣಿನ ಹಕ್ಕು, ಆಸ್ತಿ-ಅಧಿಕಾರ-ಅಂತಸ್ತು...ಇಂತಹ ಸಾಮಾನ್ಯ ಅಭಿಪ್ರಾಯಗಳನ್ನೂ ಮೀರಿ, ತನಗಿಂತಲೂ 15 ವರ್ಷ ಹಿರಿಯಳಾದ ವಿಧವೆಯನ್ನೇ ಮದುವೆಯಾಗುವ ಕಥಾನಾಯಕ ತರುಣನ ನಿರ್ಧಾರದ ಹಿಂದೆ ಮನೋವೈಜ್ಞಾನಿಕ ತರ್ಕ ಏನಿರಬಹುದು...?
ದ್ವಂದ್ವಗಳ ಸಿದ್ಧಾಂತವನ್ನು ಸರಳೀಕರಿಸುವುದಾದರೆ, ಬೇಕು-ಬೇಕು, ಬೇಕು-ಬೇಡ ಮತ್ತು ಬೇಡ-ಬೇಡ ಎಂಬ ವಿವಿಧ ಪ್ರಕಾರಗಳಡಿ ಕಥಾ ನಾಯಕಿ ‘ವಂದನಾ’ ಪಾತ್ರವನ್ನು ವಿಶ್ಲೇಷಿಸಬಹುದು. ಎರಡೂ ಆಯ್ಕೆಗಳು ನಮಗೆ ಬೇಕಿದ್ದರೂ ಒಂದನ್ನು ಮಾತ್ರ ಆಯ್ಕೆ ಮಾಡುವ ಅನಿವಾರ್ಯತೆ ಬದುಕಿನಲ್ಲಿರುತ್ತದೆ. ಮತ್ತೊಂದನ್ನು ತ್ಯಾಗ ಮಾಡುವ ಎದೆಗಾರಿಕೆ ತೋರಲೇಬೇಕು. ಬೇಕಿರುವ ಕಡೆ ಹೋಗುವಂತಿಲ್ಲ; ಆದರೆ, ಬೇಡವಾದದ್ದರ ಜೊತೆ ಇರಲೇಬೇಕು. ‘ಬೇಡ-ಬೇಡ’ ಹೀಗೆ ಎರಡೂ ‘ಬೇಡ’ವಾಗಿದ್ದರೂ ಒಂದನ್ನು ಆಯ್ಕೆ ಮಾಡುವ ಅನಿವಾರ್ಯತೆ ಇರುತ್ತದೆ. ಇಂತಹ ಪ್ರಸಂಸಗಳು ಬದುಕನ್ನು ಮಾನಸಿಕವಾಗಿ ಮುದ್ದೆಯಾಗಿಸುತ್ತವೆ.