ಮೇಜರ್ ಡಾ|ಕುಶ್ವಂತ್ ಕೋಳಿಬೈಲು ಅವರ ಸಣ್ಣ ಕಥೆಗಳ ಸಂಕಲನ ಕೂರ್ಗ್ ರೆಜಿಮೆಂಟ್. ಈ ಪುಸ್ತಕ ಲಾಕ್ ಡೌನ್ ಸಮಯದಿಂದ ಸುದ್ದಿ ಮಾಡುತ್ತಿತ್ತು. ಆರ್ಮಿಯವರ ಬಗ್ಗೆ ಕಥೆ ಬರೆಯುವಾಗ ಜೆನರಲಿ ಬರಿ ಅವರ ಪ್ರೇಮ ಕಥೆಗಳು ಅಥವಾ ಅವರು ಹುಟ್ಟಿನಿಂದ ಅದೆಷ್ಟು ಸಾಹಸಿಗಳಾಗಿರುತ್ತಾರೆ ಎಂಬುದಷ್ಟೇ ಗೊತ್ತಾಗುತ್ತದೆ. ಆದರೆ ಇಲ್ಲಿ ಒಂದು ಇಡೀ ಜಿಲ್ಲೆಯ ರೆಜಿಮೆಂಟಿನಲ್ಲಿದ್ದವರ ಕಥೆ ಮತ್ತು ಅವರ ಕುಟುಂಬದವರ ವ್ಯಥೆಯನ್ನು ಬಿಡಿಬಿಡಿಯಾಗಿ ಚಿತ್ರಿಸಿದ್ದಾರೆ. ಸೇನೆಯಲ್ಲಿದ್ದವರ ಒಂದು ಭಿನ್ನವಾದ ಆಂಗಲ್ಲಿನಲ್ಲಿ ತೋರಿಸಿ ಬರೆದ ಕಥೆಗಳು ನಾನು ಓದಿದ್ದು ಇದೇ ಮೊದಲು. ಸಾಮಾನ್ಯ ಜನರಿಗೆ ಸೇನೆಯಲ್ಲಿದ್ದವರು ಸಿಕ್ಕಾಪಟ್ಟೆ ಶಿಸ್ತಿನ ಮನುಷ್ಯರು, ಸಿಡುಕರು ಮತ್ತು ಡೀಪ್ ಲವರ್ಸ್ ಆಗಿರುತ್ತಾರೆ ಎಂಬ ಕಲವು ನಂಬಿಕೆಗಳನ್ನ ಈ ಕಥಾ ಸಂಕಲನದಲ್ಲಿ ಬಹಳ ಯಶಸ್ವಿಯಾಗಿ ಹೊಡೆದುಹಾಕಿದ್ದಾರೆ.
ಮೊದಲ ಕಥೆಯೇ ಕೂರ್ಗ್ ರೆಜಿಮೆಂಟ್, ಈ ಕಥೆಯಿಂದಲೇ ಪುಸ್ತಕದ ಹೆಸರನ್ನೂ ತೆಗೆದುಕೊಂಡಿರುವುದು. ಕಥೆಯ ಸತ್ವ ಇರುವುದು ಸೈನಿಕನ ಹೆಂಡತಿಯ ಪಾಯಿಂಟ್ ಆಫ್ ವ್ಯೂ ಇಂದ ಕಥೆ ಶುರುಮಾಡಿರುವುದು. ಮದುವೆಯಾಗಿ ಕೆಲವು ತಿಂಗಳುಗಳ ನಂತರ ಗಂಡನ ಮೃತದೇಹ ಊರಿಗೆ ಬರುತ್ತದೆ. ಸಾಮಾನ್ಯ ಜನರು “ಅವನು ಹೀರೋ, ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ” ಎಂದು ಅಂದುಕೊಂಡು ಮರುದಿವಸ ಹೆಸರನ್ನೇ ಮರೆಯುವವರು. ಆದರೆ ಸೈನಿಕನ ಹೆಂಡತಿ ಕಾವೇರಿಗೆ ಅನ್ನಿಸುವುದು “ಈತ ಸತ್ತಿದ್ದು ದೇಶಕ್ಕೆ ಅದೆಷ್ಟು ಲಾಭವಾಯಿತೋ ಏನೋ ಆದರೆ ಊರಿಗೊಬ್ಬ ಹೀರೋ ಸಿಕ್ಕ, ರಾಜಕಾರಣಿಗಳ ಭಾಷಣದಲ್ಲಿ ಬಂದು ಹೋಗಲು, ರಸ್ತೆಗೆ ಹೆಸರಿಡಳು, ಮತ್ತು ಅವನ ಸಾವಿನ ಬಗ್ಗೆ ನೀವೇನು ಹೇಳುತ್ತೀರಿ “ ಎಂದು ಕೇಳುವುದಕ್ಕೆ ಎಂದು ಖೇದ ವ್ಯಕ್ತಪಡಿಸಿದಾಗ, ಸೇನೆಯಲ್ಲಿದ್ದವರ ಮನೆಯ ತುಮುಲಗಳು ಅರ್ಥವಾಗುತ್ತದೆ. ಕಾವೇರಿಯ 3 ತಲೆಮಾರು ಕೂರ್ಗ್ ರೆಜಿಮೆಂಟಿಗೆ ವಿಶ್ವಯುದ್ಧದಿಂದ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂಬುದು ಅಲ್ಲಿನ ಮನೆಮನೆ ಕಥೆ ಎಂಬುದು ನಂಬಲಸಾಧ್ಯ.
ಬೊಳ್ಳಮ್ಮ ಕಥೆಯಲ್ಲಿ ನರ್ಸುಗಳು ಮತ್ತು ಈ ಮಿಲಿಟರಿಯವರ ಸಂಬಂಧದ ಕಥೆಯನ್ನ ಎಳೆಎಳೆಯಾಗಿ ಬಿಡಿಸಿದ್ದಾರೆ. ಈ ಕಥೆಯಲ್ಲಿ ಕೆಲವು ಪಂಚಿಂಗ್ ಲೈನ್ಸ್ ಸಹ ಇದೆ. ಹುಡುಗರ ಗುಂಪಿನಲ್ಲಿ ಅವರ ತಂಗಿಯನ್ನು ಸಕ್ಕತ್ತಾಗಿದ್ದಾಳೆ ಎಂದೆಲ್ಲಾ ಹೇಳದಿರುವುದು ಅಲಿಖಿತ ನಿಯಮ. ಆದರೆ ಹುಡುಗಿಯರ ಗುಂಪಿನಲ್ಲಿ ಅವರ ಅಣ್ಣನೋ ತಮ್ಮನೋ ಸಕ್ಕತ್ತಾಗಿದ್ದಾನೆ ಎಂದು ಹೇಳುವುದು ಬಹಳ ಈಸಿ ಮತ್ತು ಹಾಗೆ ಹೇಳುವುದು ತಪ್ಪಲ್ಲ ಎಂದು ಬರೆದು ಹಿಪಾಕ್ರಸಿಯನ್ನು ಬಯಲು ಮಾಡುತ್ತಾರೆ. ಮುತ್ತಣ್ಣ ಎಂಬ ಸೈನಕನಿಗೆ ತಾನು ಇಷ್ಟ ಪಟ್ಟವಳನ್ನ ಒಂದೆರೆಡು ಪೋಸ್ಟಿಂಗ್ ಗೆ ಕರೆದುಕೊಂಡು ಹೋಗಿ ಮತ್ತು ಪಿಂಚಣಿಯಲ್ಲಿ ನೆಮ್ಮದಿಯಾಗಿ ಜೀವನ ನಡೆಸಬಹುದು ಎಂಬ ಏಕೈಕ ಆಸೆ ಬಂದೂಕು ಹಿಡಿದು ದೇಶ ಕಾಯುವವನ ಮುಖ್ಯ ಆಸೆ ಎಂಬುದು ತಿಳಿದು ಮುಖದಲ್ಲಿ ಒಂದು ಮುಗುಳ್ನಗೆ ಬರುತ್ತದೆ.
ಈ ಪುಸ್ತಕದ ಹೀರೋ ಗಣಿ ಬೋಪಣ್ಣ. ಸಾಹಸಿ, ಮುಂಗೋಪಿ , ಉತ್ತಮ ಕ್ರೀಡಾಪಟು. ಮಿಲಟರಿಯವರನ್ನ ನಾವು ಕಲ್ಪಿಸಿಕೊಂಡಂತೆ. ಬೇಕಾಗಿದ್ದನ್ನು ಸಾಧಿಸುವ ಚಲ ಹೊಂದಿದವನು. ಯಾರದೋ ಮೇಲಿನ ಜಿದ್ದಿಗೆ ಹೋಗಿ ಮಿಲಿಟರಿ ಸೇರಿಕೊಂಡಿದ್ದು, ಅದೂ ಕಾಶ್ಮೀರದಲ್ಲಿ ಪೋಸ್ಟಿಂಗ್ ಆಗಿದ್ದು, ಕಾರ್ಗಿಲ್ ಕಾರ್ಯಚರಣೆಯಲ್ಲಿ ಪಾಕಿಸ್ತಾನದಲ್ಲಿ ಮೂರು ದಿನ ಸಂಪರ್ಕ್ಕಕ್ಕೆ ಬರೆದೇ ಇದ್ದದ್ದು , ಆಮೇಲೆ ಹೀರೋ ಆಗಿ ತೆವಳಿಕೊಂಡೇ ಬಾರ್ಡರ್ ಸೇರಿದ್ದು, ತಾನೇ ಸರ್ವ ಶ್ರೇಷ್ಠ ಪ್ಯಾರಾ ರೆಜಿಮೆಂಟಿನ ಕಮಾಂಡೋ ಎಂದೆಲ್ಲಾ ಕೊಚ್ಚಿಕೊಳ್ಳೋದು ಗಣಿ ಬೋಪಣ್ಣನ ವೈಶಿಷ್ಟ್ಯ. ಯಾವಾಗ ಸಿಕ್ಕರೂ “ಬನ್ನಿ ಒಂದು ಪೆಗ್ ಹಾಕೋಣ” ಎಂದು ಕರೆಯುವ ಸಿಂಪಲ್ ಮನುಷ್ಯ. ಒಂದು ಮಾಜಿ ಸೈನಿಕನ ಲವಲವಿಕೆಯ ಜೀವನ ಶೈಲಿ, ತಮಾಷೆ, ಲವ್ವು ಎಲ್ಲವೂ ಇಲ್ಲಿ ಅಡಕವಾಗಿದೆ. ಒಮ್ಮೊಮ್ಮೆ ನಗಿಸಿ, ಅಳಿಸಿ ಮತ್ತು ವಿಪರೀತ ಕೋಪ ಬರಿಸಿ ನಮ್ಮ ಭಾವನೆಗಳ ಜೊತೆ ಆಟವಾಡುವ ಕಥೆ ಇದು. ಈ ಸಂಕಲನದ ಅತಿ ಉದ್ದ ಕಥೆಯೂ ಇದೇ ಅನ್ನಿಸುತ್ತದೆ ನನಗೆ, ಎಲ್ಲಾ ಡೀಟೇಲ್ಸ್ ಒಂದು ಸೋಲ್ ಇರುವ ಕಥೆ ಇದು.
ಒಂದು ಬೊಗಸೆ ಮಣ್ಣು ಕಥೆಯಲ್ಲಿ ಭಾರತದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಕರ್ನಲ್ ಸೋಧಿ ತನ್ನ ಹುಟ್ಟೂರನ್ನ ಪಾಕಿಸ್ತಾನದಲ್ಲಿ ಶಾಶ್ವತವಾಗಿ ಕಳೆದುಕೊಂಡಿದ್ದ. ಯಾವುದೋ ಆಕ್ರಮಣದ ಸಮಯದಲ್ಲಿ ಪಾಕಿಸ್ತಾನದ ಆ ಜಾಗಕ್ಕೆ ಹೋದಾಗ ತನ್ನೂರು ಎಂದು ನೆನೆಸಿಕೊಂಡು ಕಣ್ಣೀರಾಗಿ, “ನನ್ನ ಹಿರಿಯರಂತೆ ನನಗೆ ಈ ಮಣ್ಣಿನಲ್ಲಿ ಮಣ್ಣಾಗುವ ಅದೃಷ್ಟ ಇಲ್ಲ” ಎಂದು ಪರದೇಶದ ತನ್ನೂರನ್ನು ಇನ್ನೂ ಕ್ಲೋಸ್ ಟು ಹಾರ್ಟ್ ಇಟ್ಟುಕೊಂಡಿರುವ ಸೋಧಿಯ ಬಗ್ಗೆ ದೇವಯ್ಯನಿಗೆ ಯಾವಾಗಲೂ ಸ್ವಲ್ಪ ಅನುಮಾನ ಆದರೇ ತನ್ನದೇ ಊರಿಗೆ ಈ ರೀತು ಕುತ್ತು ಬಂದಿರುವುದು ಕಂಡಾಗ ಸೋಧಿಯ ನೋವು ಗೊತ್ತಾಗುವುದು ಒಂದು ಸೋಜಿಗ.
ಇವಷ್ಟು ಕಥೆಗಳು ಈ ಸಂಕಲನದ ಬೆಸ್ಟ್ ಸ್ಟೋರೀಸ್. ಇನ್ನೂ 8 ಕಥೆಗಳಿವೆ. ಅದರಲ್ಲಿ ಸೈನಿಕನೂ ಒಬ್ಬ ಸಾಮಾನ್ಯ ಮನುಷ್ಯ ಅವನಿಗೆ ಅದೆಷ್ಟೋ ಭಾವನೆಗಳು ಮತ್ತು ಜೀವನ ಪ್ರೀತಿ ಇದೆ ಎಂದು ತೋರಿಸುವ ಗುಣ ಇದೆ. ಈ ಪುಸ್ತಕ ಸ್ಟಾಂಡ್ ಔಟ್ ಆಗೋದು ನಮಗೆ ತಿಳಿದ ಸೈನಿಕರ ಕಥೆಗಳಿಗಿಂತ ಇದು ಅವರ ಸುತ್ತ ಮುತ್ತ ಇರುವವರ ಪಾಯಿಂಟ್ ಆಫ್ ವ್ಯೂ ಇಂದ ತೋರಿಸುವ ಪ್ರಯತ್ನ ಮಾಡುತ್ತದೆ. ಗಣಿ ಬೋಪಣ್ಣ ಕಥೆ ಬಿಟ್ಟು ಮಿಕ್ಕ ಕಥೆಗಳನ್ನು ಇನ್ನೂ ವಿವರವಾಗಿ ಬರೆದಿದ್ದರೆ ಈ ಪುಸ್ತಕ ಪರ್ಫೆಕ್ಟ್ ಆಗುತ್ತಿತ್ತು. ಕೆಲವು ಕಥೆಗಳ ಎಂಡಿಂಗ್ ಪ್ರೆಡಿಕ್ಟೀವ್ ಅನಾಲಿಸಿಸಿನಲ್ಲಿ 100ಕ್ಕೆ 100 ಮಾರ್ಕ್ಸ್ ಪಡೆಯುತ್ತದೆ.ಕಥೆಗಾರ ಅದೆಲ್ಲದಕ್ಕೆ ಸ್ವಲ್ಪ ಟ್ವಿಸ್ಟ್ ಕೊಡಬಹುದಿತ್ತು ಎಂದು ನನ್ನ ಅಭಿಪ್ರಾಯ.
ಒಂದೊಳ್ಳೆ ಕಥೆ ಪುಸ್ತಕವನ್ನ ಓದಿಸಿ, ಬಂದೂಕು ಹಿಡಿದವರ ನಾಡಿಮಿಡಿತವನ್ನ ತಿಳಿಸಿದ ಮೇಜರ್ ಡಾ ಕುಶ್ವಂತ್ ಅವರಿಗೆ ಧನ್ಯವಾದಗಳು. ಇನ್ನೂ ಒಳ್ಳೊಳ್ಳೆ ಕಥೆಗಳು, ಇನ್ಸೈಡ್ ಕಥೆಗಳು ಅವರ ಲೇಖನಿಯಿಂದ ಬರಲಿ ಎಂದು ಹಾರೈಸುತ್ತೇನೆ.