'If you both really love each other, whatever it comes u don't leave your hands, even if I come in between..'
ಆಸುಪಾಸು ಕೊಂಚ ತನ್ನ ವಯಸ್ಸಿನ (ಇಬ್ಬರು ಮಕ್ಕಳ ತಾಯಿ ಮತ್ತು ವಿಚ್ಛೇದಿತೆ) ಮಹಿಳೆಯನ್ನು, 15 ವರ್ಷದಷ್ಟು ಹಿರಿಯಳಾದ ಪಿಎಚ್.ಡಿ ಮಾರ್ಗದರ್ಶಿಯನ್ನು ಮದುವೆ ಆಗುವುದಾಗಿ ಇಂಗಿತ ವ್ಯಕ್ತಪಡಿಸುವ ಮಗನ ಮತ್ತು ಆಕೆಯ ಕೈಗಳನ್ನು ಒಂದಾಗಿಸಿ, ಮುಕ್ತಮನಸ್ಸಿನಿಂದ ತಾಯಿ ಹೀಗೆ ಹರಿಸುತ್ತಾಳೆ. ವಿದೇಶದಲ್ಲಿರುವ ಮಗ, ಸೊಸೆ ಮತ್ತು ಮೊಮ್ಮಕ್ಕಳಿಗೆ ಪುಣೆಯಲ್ಲಿರುವ ಮನೆಗೆ ಬರುವಂತೆ ಆಹ್ವಾನಿಸುತ್ತಾಳೆ.
.................
ನೀ ಸಮಾ ಉಂಡಿದ್ಯಾ ಮಗಾ?
ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಜೀವನ್ಮರಣದ ನಡುವೆ ಹೋರಾಡಿ, ಅನೇಸ್ತಿಸಶಿಯಾ ಕಾರಣ ರಾತ್ರಿಯಿಡೀ ನಿದ್ದೆಗೆ ಜಾರಿ ಐಸಿಯುನಲ್ಲಿ ಆಗಷ್ಟೇ ಕಣ್ಣು ಬಿಟ್ಟ ತಾಯಿಗೆ ಮಗ ಕಂಡ ಕೂಡಲೇ ಕಾಡುವ ಪ್ರಶ್ನೆ, ಕಾಳಜಿ.
ಅಸಲಿಗೆ, ಮಗನಿಗೆ ಆತಂಕ, ಗಾಬರಿ, ದುಃಖದಿಂದ ಹಿಂದಿನ ದಿನ ತಿಂಡಿಯನ್ನೂ ಸಹ ತಿನ್ನಲು ಆಗಿರುವುದಿಲ್ಲ
.................
ಹಿರಿಯರಾದ ಸತೀಶ ಚಪ್ಪರಿಕೆ ಅವರ ವರ್ಜಿನ್ ಮೊಹಿತೊ ಕೃತಿಯ ಎರಡು ಕತೆಗಳ ಪಾತ್ರಗಳಿವು. ಎರಡೂ ಕತೆಗಳ ಕೊನೆಯ ಸಾಲುಗಳು ಹೌದು!
ಅಂತಿಮ ಘಟ್ಟದಲ್ಲಿ ಪಾತ್ರಗಳ ಮೂಲಕ ಸಂಭಾಷಣೆ ಅನಾವರಣಗೊಳ್ಳುತ್ತದೆಯಾದರೂ ಈ ಸನ್ನಿವೇಶ ಬರುವವರೆಗಿನ ತಾಕಲಾಟ, ತುಡಿತ, ಕಳವಳ, ಮಮತೆ, ಆರೈಕೆ, ಅದಮ್ಯ ಪ್ರೇಮ, ಬಿಡಿಸಲಾಗದ ಬಂಧ ಎಲ್ಲವನ್ನೂ ಈ ಒಂದೆರಡು ಸಾಲುಗಳು ಸಂಕ್ಷಿಪ್ತವಾಗಿ ಹೇಳುತ್ತವೆ.
ಇತ್ತೇಚೆಗಷ್ಟೇ ಬಿಡುಗಡೆಯಾದ ಈ ಕೃತಿಯ 'ವರ್ಜಿನ್ ಮೊಹಿತೊ' ಶೀರ್ಷಿಕೆ ವಿಚಿತ್ರ ಅನ್ನಿಸಿತು. ಅಷ್ಟೇ ಕುತೂಹಲವು ಕೆರಳಿಸಿತು. ಬಂಗಾಳಿ ಲಿಂಕ್ ಇದೆಯೇ ಎಂಬ ಸಣ್ಣ ಅನುಮಾನವೂ ಬಂತು. ಕೃತಿಯಲ್ಲಿ ಆ ಕತೆಯನ್ನು ಓದಿದಾಗ, ಒಂದು ಕ್ಷಣ ಬೆಚ್ಚಿಬಿದ್ದೆ.ಇಡೀ ಕತೆ ಓದಿದರೂ ಸ್ವಲ್ಪವೂ ಕಾಣಿಸಿಕೊಳ್ಳದ, ಸುಳಿವು ನೀಡದ 'ವರ್ಜಿನ್ ಮೊಹಿತೊ' ದುತ್ತೆಂದು ಕೊನೆಯ ಸಾಲಿನಲ್ಲಿ ಬರುತ್ತದೆ!
ಈ ಪುಸಕದಲ್ಲಿನ ಕತೆಗಳು ಟ್ವಿಸ್ಟ್ ನೀಡೋದೆ ಹೀಗೆ. ಒಂದಕ್ಕಿಂತ ಒಂದು ಭಿನ್ನ, ಪ್ರಸ್ತುತ ಕ್ಷಣಗಳನ್ನು ಆಸ್ವಾದಿಸುತ್ತಿರುವಾಗಲೇ-ಯಾವಾಗ ಫ್ಲ್ಯಾಶ್ ಬ್ಯಾಕ್ ಹೋಗಿದ್ದೇವೆ ಎಂಬುದೇ ಅರಿವಿಗೆ ಬರುವುದಿಲ್ಲ. ಭೂತ-ವರ್ತಮಾನ-ಭವಿಷ್ಯ ನಡುವೆ ಪದೇ ಪದೇ ಹೋಗಿ ಬರುತ್ತಿದ್ದರೂ Reading ಕಿಂಚಿತ್ತೂ disturb ಅಥವಾ ಕಿರಿಕಿರಿ ಆಗುವುದಿಲ್ಲ. ಅಷ್ಟೇ ಸರಾಗವಾಗಿ, ಶಾಂತವಾಗಿ ಪಾತ್ರಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ.
ಕತೆಗಳ ಹುಟ್ಟುಗಳ ಬಗ್ಗೆ ಚೆಂದನೆಯ ಮುನ್ನುಡಿ ಬರೆದಿರುವ ಸತೀಶ ಸರ್ ಅವರು ಪತ್ರಕರ್ತ, ಲೇಖಕ, ಕಥೆಗಾರ ನಡುವಿನ ವ್ಯತ್ಯಾಸವನ್ನು Between the lines ನಲ್ಲಿ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಕತೆಗಳ ಮೂಲಕ ತಮ್ಮ ಜೀವನಾನುಭವವನ್ನೇ ಅವರು ತೆರೆದಿಟ್ಟಿದ್ದಾರೆ.
ಅಂದ ಹಾಗೆ, ನಾನು ಕೂಡ ಕೊನೆಯ ಸಾಲಿನಲ್ಲಿ ಹೇಳುವುದೇನೆಂದರೆ, ಸಂಜೆಯಿಂದ ಮಧ್ಯರಾತ್ರಿ ಆಗುವುದರೊಳಗೆ ಇಡೀ ಕೃತಿಯನ್ನು ಓದಿ ಮುಗಿಸಿದೆ!!
ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ವರ್ಜಿನ್ ಮೊಹಿತೊ